
ಬೆಂಗಳೂರು, ಸೆ. 9: ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಮನೆಯಲ್ಲಿ ಮಹತ್ವದ ದಾಖಲೆಗಳು ಹಾಗೂ ಇತರೆ ವಿವರಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇಂದು ಬೆಳಗ್ಗೆ ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಸಚಿವರ ನಿವಾಸಕ್ಕೆ ಪ್ರವೇಶಿಸಿ ಶೋಧ ಕಾರ್ಯ ಆರಂಭಿಸಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಬಾರ್ ಲೈಸೆನ್ಸ್ ಅಕ್ರಮ ಹಾಗೂ ಹವಾಲಾ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಕೊಂಡಿಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ. ಸಚಿವರ ನಿವಾಸದಲ್ಲಿರುವ ಪ್ರಮುಖ ದಾಖಲೆಗಳು, ಆಸ್ತಿ ಪತ್ರಗಳು ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಜೂನ್ ತಿಂಗಳಲ್ಲಿ ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಅಥಣಿ ಪ್ರದೇಶಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಾರ್ ಲೈಸೆನ್ಸ್ ನೀಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆದಿದ್ದ ಈ ಕಾರ್ಯಾಚರಣೆಯಲ್ಲಿ ಮಂಜುನಾಥ್ ಅವರ ಮನೆಯಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್‌ಗಳು, ₹5.5 ಲಕ್ಷ ನಗದು ಹಾಗೂ ಸುಮಾರು ₹13.3 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು ಎಂದು ವರದಿಯಾಗಿತ್ತು.
ಈ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೂ ದಾಳಿ ನಡೆದಿದೆ ಎನ್ನಲಾಗಿದ್ದು, ಅಕ್ರಮ ಹಣ ವರ್ಗಾವಣೆ ಹಾಗೂ ಹವಾಲಾ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳಿಗಾಗಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಚಿವರ ನಿವಾಸದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಇಡಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ.

