ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ನೇರ ಹಂಚಿಕೆ ಇಲ್ಲ: ಮಧ್ಯವರ್ತಿಗಳ ಬಗ್ಗೆ ಎಚ್ಚರ!

Spread the love

ನಕಲಿ ದಾಖಲೆ ಸೃಷ್ಟಿಸಿ ಹಣ ವಸೂಲಿ ಮಾಡುವ ಜಾಲ; ಸಾರ್ವಜನಿಕರು ಮೋಸ ಹೋಗದಂತೆ ಅಧ್ಯಕ್ಷ ಶಾಕೀರ್ ಸನದಿ ಮನವಿ

ಧಾರವಾಡ: ನವೆಂಬರ್ 25: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ರಚಿಸಲಾದ ವಿವಿಧ ವಸತಿ ವಿನ್ಯಾಸಗಳಲ್ಲಿನ ಮೂಲೆ ಹಾಗೂ ಬಿಡಿ ನಿವೇಶನಗಳ ನೇರ ಹಂಚಿಕೆ ಪ್ರಸ್ತುತ ನಡೆಯುತ್ತಿಲ್ಲ. ಹೀಗಿದ್ದರೂ, ಕೆಲವು ಮಧ್ಯವರ್ತಿಗಳು ಪ್ರಾಧಿಕಾರದ ನಕಲಿ ದಾಖಲೆ ಹಾಗೂ ನಕಲಿ ಸಹಿ ಸೃಷ್ಟಿಸಿ, ನೇರವಾಗಿ ನಿವೇಶನಗಳನ್ನು ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ ಎಂದು ಅಧ್ಯಕ್ಷ ಶಾಕೀರ್ ಸನದಿ ಅವರು ಎಚ್ಚರಿಕೆ ನೀಡಿದ್ದಾರೆ.

​ಈ ಕುರಿತು ಪ್ರಕಟಣೆ ನೀಡಿರುವ ಅವರು, ನವೆಂಬರ್ 19 ಮತ್ತು 20, 2025 ರಂದು ವಿವಿಧ ದಿನಪತ್ರಿಕೆಗಳು ಹಾಗೂ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಮೂಲೆ ಮತ್ತು ಬಿಡಿ ನಿವೇಶನಗಳ ಇ-ಹರಾಜು ಪ್ರಕಟಣೆಯನ್ನು ಈಗಾಗಲೇ ಹೊರಡಿಸಲಾಗಿದೆ. ಪ್ರಸ್ತುತ ಪ್ರಾಧಿಕಾರದಿಂದ ಯಾವುದೇ ನಿವೇಶನಗಳನ್ನು ನೇರ ಹಂಚಿಕೆ ಮಾಡಲಾಗುತ್ತಿಲ್ಲ.

ಸಹಾಯವಾಣಿ ಸಂಪರ್ಕಿಸುವಂತೆ ಮನವಿ:

​ಮಧ್ಯವರ್ತಿಗಳಿಂದ ಸಾರ್ವಜನಿಕರು ಮೋಸ ಹೋಗಬಾರದು. ಪ್ರಾಧಿಕಾರದ ಹೆಸರಿನಲ್ಲಿ ನಿವೇಶನಗಳನ್ನು ಖರೀದಿಸುವಾಗ ಅದರ ನೈಜತೆ ಕುರಿತು ಸಾರ್ವಜನಿಕರು ಕಡ್ಡಾಯವಾಗಿ ಪ್ರಾಧಿಕಾರವನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಅಧ್ಯಕ್ಷ ಶಾಕೀರ್ ಸನದಿ ಅವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *