ಹಾವೇರಿ: ಮದುವೆ ವಂಚನೆ ಆರೋಪ: ಯುವತಿ ಆತ್ಮಹತ್ಯೆ, ಆರೋಪಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Spread the love

ಹಾವೇರಿ/ರಾಣೆಬೆನ್ನೂರು: ‘ಪ್ರೇಮಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ’ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಸಿಂಧೂರಿ ಪರಮೇಶಪ್ಪ ಪರಣ್ಣನವರ (26) ಎಂಬ ಯುವತಿ ಶುಕ್ರವಾರ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿಯ ಸಾವಿಗೆ ಪ್ರೇಮಿ, ಆತನ ಕುಟುಂಬಸ್ಥರು ಮತ್ತು ಪೊಲೀಸರೇ ಕಾರಣ ಎಂದು ಆರೋಪಿಸಿರುವ ಸಂಬಂಧಿಕರು, ರಾಣೆಬೆನ್ನೂರು ತಾಲ್ಲೂಕಿನ ಕುದರಿಹಾಳ ಗ್ರಾಮದಲ್ಲಿರುವ ಆರೋಪಿತ ಯುವಕನ ಮನೆ ಮುಂದೆ ಮೃತದೇಹವಿಟ್ಟು ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.

ವಂಚನೆ ಮತ್ತು ಪೊಲೀಸರ ನಡೆ ಬಗ್ಗೆ ಆರೋಪ:

​ಸಿಂಧೂರಿ ಮತ್ತು ಶರತ್ ನೀಲಪ್ಪನವರ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಮತ್ತು ಶರತ್ ಮದುವೆಯಾಗುವ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ, ಬಳಿಕ ಆತ ಮದುವೆಗೆ ನಿರಾಕರಿಸಿ ಅಂತರ ಕಾಯ್ದುಕೊಂಡಿದ್ದರಿಂದ ನೊಂದ ಯುವತಿ ಕೆಲವು ದಿನಗಳ ಹಿಂದೆ ಕುಟುಂಬ ಸಮೇತ ರಾಣೆಬೆನ್ನೂರು ಗ್ರಾಮೀಣ ಠಾಣೆಗೆ ತೆರಳಿದ್ದರು.

​ಪ್ರತಿಭಟನಾನಿರತ ಸಂಬಂಧಿಕರ ಪ್ರಕಾರ, “ಆರೋಪಿ ಶರತ್ ಮತ್ತು ಆತನ ಕುಟುಂಬದವರು ಮರಳುಗಾರಿಕೆ ಸೇರಿದಂತೆ ಹಲವು ವ್ಯವಹಾರ ನಡೆಸುವುದರಿಂದ ಅವರಿಗೆ ಪೊಲೀಸರ ಪರಿಚಯವಿದೆ. ಹಾಗಾಗಿ, ಯುವತಿ ಮತ್ತು ಆಕೆಯ ಕುಟುಂಬ ದೂರು ನೀಡಲು ಹೋದಾಗ ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದಾರೆ. ಬದಲಿಗೆ, ಠಾಣೆಯಲ್ಲೇ ರಾಜಿ ಸಂಧಾನಕ್ಕೆ ಅವಕಾಶ ನೀಡಿ, ಎರಡೂ ಕಡೆಯವರನ್ನು ವಾಪಸ್ ಕಳುಹಿಸಿದ್ದಾರೆ.” ಠಾಣೆಯಲ್ಲಿ ನ್ಯಾಯ ಸಿಗಲಿಲ್ಲ ಎಂಬ ನೋವಿನಿಂದಲೇ ಸಿಂಧೂರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ.

ಸಂಬಂಧಿಕರ ಆಕ್ರೋಶ ಮತ್ತು ಒತ್ತಾಯ:

​ಯುವತಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಂಬಂಧಿಕರು, “ಪೊಲೀಸರು ಹಣ ಪಡೆದು ರಾಜಿ ಸಂಧಾನಕ್ಕೆ ಅವಕಾಶ ನೀಡಿದ್ದಾರೆ ಎಂಬ ಸಂಶಯವಿದೆ. ಮಹಿಳಾ ಎಸ್‌ಪಿ ಇರುವ ಜಿಲ್ಲೆಯಲ್ಲಿಯೇ ಯುವತಿಗೆ ಅನ್ಯಾಯವಾಗಿದೆ. ಠಾಣೆಯಲ್ಲಿರುವ ತಪ್ಪಿತಸ್ಥ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕು. ಅಲ್ಲದೆ, ಯುವತಿಯ ಸಾವಿಗೆ ಕಾರಣರಾದ ಶರತ್ ಹಾಗೂ ಆತನ ಕುಟುಂಬ ಸದಸ್ಯರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು” ಎಂದು ತೀವ್ರವಾಗಿ ಒತ್ತಾಯಿಸಿದ್ದಾರೆ.

ಎಎಸ್ಪಿ ಪ್ರತಿಕ್ರಿಯೆ:

​ಈ ಘಟನೆ ಕುರಿತು ‘ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹಾವೇರಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಎಲ್.ವೈ. ಶಿರಕೋಳ ಅವರು, “ಯುವತಿ ಮತ್ತು ಯುವಕನ ಕಡೆಯವರು ಠಾಣೆಗೆ ಬಂದಿದ್ದರೂ, ತಮ್ಮಲ್ಲಿಯೇ ರಾಜಿ ಸಂಧಾನ ಮಾಡಿಕೊಳ್ಳುವುದಾಗಿ ತಿಳಿಸಿ ವಾಪಸ್ ಹೋಗಿದ್ದ ಬಗ್ಗೆ ಮಾಹಿತಿ ಇದೆ. ಈಗ ಯುವತಿ ಆತ್ಮಹತ್ಯೆ ವಿಚಾರ ಗಮನಕ್ಕೆ ಬಂದಿದ್ದು, ಏನಾಗಿದೆ ಎಂಬುದನ್ನು ವಿಚಾರಣೆ ಮಾಡಲು ಡಿವೈಎಸ್ಪಿ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *