
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ 2025-26ನೇ ಸಾಲಿನ ಗೌರವ ಸಂಭಾವನೆ ಪಾವತಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಸಾಲಿನ ಅಂತ್ಯದವರೆಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿತ್ತು. ಇದೀಗ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಜೂನ್ 2025ರಿಂದ ಸೆಪ್ಟೆಂಬರ್ 2025ರವರೆಗೆ ಒಟ್ಟು ₹20,416.20 ಲಕ್ಷ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ಜೂನ್ 2025ರಿಂದ ನವೆಂಬರ್ 2025ರವರೆಗೆ ₹7,124.25 ಲಕ್ಷ ಗೌರವ ಸಂಭಾವನೆ ಬಿಡುಗಡೆ ಮಾಡಲಾಗಿದೆ.
ಈ ಅನುದಾನವು ನೇರವಾಗಿ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳಿಗೆ ಬಿಡುಗಡೆಯಾಗಿದ್ದು, ವಿಳಂಬಕ್ಕೆ ಅವಕಾಶ ನೀಡದೆ ತಕ್ಷಣವೇ ಡಿಡಿಓ ಲಾಗಿನ್ಗೆ ಅಪ್ಲೋಡ್ ಮಾಡಿಸಿಕೊಂಡು, ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲು ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಬಟವಾಡೆ ಅಧಿಕಾರಿಗಳು ತಮ್ಮ ಡಿಎಸ್ಸಿ ಅವಧಿ ಮುಗಿಯುವ 15 ದಿನಗಳ ಮುಂಚಿತವಾಗಿಯೇ ನವೀಕರಣಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.
ಅನುದಾನ ಪಾವತಿಯಲ್ಲಿ ಯಾವುದೇ ಹಂತದಲ್ಲಿ ವಿಳಂಬವಾದಲ್ಲಿ ಅಥವಾ ಅನುದಾನ ವ್ಯಪಗತವಾದಲ್ಲಿ, ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಈ ಕುರಿತು ಕಾಲಕಾಲಕ್ಕೆ ಮೇಲುಸ್ತುವಾರಿ ವಹಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ (ಆಡಳಿತ) ನಿರ್ದೇಶನ ನೀಡಲಾಗಿದೆ. ಅಕ್ಟೋಬರ್ ಮಾಹೆಯ ಪೂರ್ಣ ಗೌರವ ಸಂಭಾವನೆ ಪಾವತಿಸುವ ಕುರಿತು ಸಹ ಕ್ರಮವಹಿಸುವಂತೆ ತಿಳಿಸಲಾಗಿದೆ.

