ಬರದ ನಡುವೆಯೂ ಅಬಕಾರಿ ಇಲಾಖೆಗೆ ಭರಪೂರ ಆದಾಯ: 3 ತಿಂಗಳಲ್ಲಿ ₹11,595 ಕೋಟಿ ಸಂಗ್ರಹ

Spread the love

ಬೆಂಗಳೂರು: ರಾಜ್ಯದಲ್ಲಿ ಬರದ ಪರಿಸ್ಥಿತಿ ಮುಂದುವರಿದಿದ್ದರೂ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಇಲಾಖೆ ಭರಪೂರ ಆದಾಯ ತಂದುಕೊಟ್ಟಿದೆ. ಪ್ರಸಕ್ತ ಸಾಲಿನ ಜುಲೈನಿಂದ ಸೆಪ್ಟೆಂಬರ್‌ವರೆಗಿನ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಅಬಕಾರಿ ಇಲಾಖೆಯು ಒಟ್ಟು ₹11,595 ಕೋಟಿ ರಾಜಸ್ವ ಸಂಗ್ರಹಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಅಬಕಾರಿ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2025ರ ಜುಲೈನಿಂದ ಸೆಪ್ಟೆಂಬರ್‌ವರೆಗೆ ₹10,303 ಕೋಟಿ ರಾಜಸ್ವ ಸಂಗ್ರಹವಾಗಿತ್ತು. ಈ ಬಾರಿ ₹1,291.94 ಕೋಟಿ ಹೆಚ್ಚುವರಿ ಆದಾಯ ಬಂದಿದ್ದು, ಶೇ.12.54ರಷ್ಟು ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಬಿಯರ್ ಮಾರಾಟದಲ್ಲಿ ಶೇ.49.69ರಷ್ಟು ಹೆಚ್ಚಳ

ಕಳೆದ ವರ್ಷದ ಜುಲೈನಿಂದ ಸೆಪ್ಟೆಂಬರ್‌ವರೆಗೆ 169.12 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್‌ (ಐಎಂಎಲ್) ಹಾಗೂ 84.63 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ 171.69 ಲಕ್ಷ ಬಾಕ್ಸ್ ಐಎಂಎಲ್ ಮತ್ತು 126.68 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದರೊಂದಿಗೆ ಐಎಂಎಲ್ ಮಾರಾಟದಲ್ಲಿ ಶೇ.1.52 ಹಾಗೂ ಬಿಯರ್ ಮಾರಾಟದಲ್ಲಿ ಶೇ.49.69ರಷ್ಟು ಹೆಚ್ಚಳವಾಗಿದೆ.

ಬಿಯರ್‌ನಿಂದ ಕಳೆದ ವರ್ಷ ಇದೇ ಅವಧಿಯಲ್ಲಿ ₹1,234.50 ಕೋಟಿ ಆದಾಯ ಸಂಗ್ರಹವಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ₹1,463.07 ಕೋಟಿ ಆದಾಯ ಬಂದಿದೆ. ಇದರಿಂದ ₹228.57 ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ. ಇದೇ ರೀತಿ ಐಎಂಎಲ್‌ನಿಂದ ಕಳೆದ ವರ್ಷ ₹7,968.69 ಕೋಟಿ ಆದಾಯ ಬಂದಿದ್ದು, ಈ ವರ್ಷ ₹9,033.21 ಕೋಟಿ ಸಂಗ್ರಹವಾಗಿದೆ. ಅಂದರೆ ಐಎಂಎಲ್‌ನಿಂದ ₹1,064.52 ಕೋಟಿ ಹೆಚ್ಚುವರಿ ಆದಾಯ ಬಂದಿದೆ.

ಹೊಸ ತೆರಿಗೆ ಪದ್ಧತಿಯಿಂದ ಆದಾಯ ಹೆಚ್ಚಳ?

ರಾಜ್ಯದಲ್ಲಿ ಮೇ 11ರಿಂದ ಮದ್ಯದ ಆಲ್ಕೋಹಾಲ್ ಪ್ರಮಾಣ ಆಧಾರಿತ (ಎಐಬಿ) ನೂತನ ತೆರಿಗೆ ಪದ್ಧತಿ ಜಾರಿಗೆ ಬಂದಿದೆ. ಇದರ ಪರಿಣಾಮವಾಗಿ ಕೆಳ ಹಾಗೂ ಮಧ್ಯಮ ವರ್ಗದವರು ಹೆಚ್ಚಾಗಿ ಸೇವಿಸುವ ಒರಿಜನಲ್ ಚಾಯ್ಸ್, ಹಯ್ಯರ್ಡ್ಸ್, ರಾಜಾ ವಿಸ್ಕಿ ಸೇರಿದಂತೆ ಹಲವು ಕಡಿಮೆ ಬೆಲೆಯ ಮದ್ಯ ಹಾಗೂ ಕೆಲವು ಬಿಯರ್‌ಗಳ ಬೆಲೆಯಲ್ಲಿ ಸರಾಸರಿ ₹20ರಿಂದ ₹30ರವರೆಗೆ ಏರಿಕೆಯಾಗಿದೆ. ಬೆಲೆ ಹೆಚ್ಚಳ ಹಾಗೂ ಮಾರಾಟದಲ್ಲಿನ ಏರಿಕೆಯಿಂದ ಅಬಕಾರಿ ಇಲಾಖೆಯ ಆದಾಯವೂ ಹೆಚ್ಚಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *