ರಾಜ್ಯದ 177 ತಾಲೂಕುಗಳಲ್ಲಿ ₹46 ಸಾವಿರ ಕೋಟಿ ನಷ್ಟ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ

Spread the love

ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಮರುಪರಿಶೀಲಿಸಲಾಗುತ್ತಿದ್ದು, ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಕ್ರೀಡಾಪಟುಗಳಿಗೆ ಎಷ್ಟು ಬಹುಮಾನ ಮೊತ್ತ ನೀಡಬೇಕು ಎಂಬುದನ್ನು ನಾಳೆ ಮುಖ್ಯಮಂತ್ರಿ ಹಾಗೂ ತಾವು ಸರ್ಕಾರದ ವತಿಯಿಂದ ಘೋಷಿಸುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ಪೂವಮ್ಮ ಅವರು ಜಪಾನ್‌ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಲಾಗಿತ್ತು. ಆದರೆ, ಆಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಒಂದೆರಡು ಗಂಟೆಗಳಲ್ಲೇ ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪೂವಮ್ಮ ಅವರಷ್ಟೇ ಅಲ್ಲದೆ, ಬೇರೆ ಬೇರೆ ಅಥ್ಲೀಟ್‌ಗಳೊಂದಿಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಬಹುಮಾನ ಮೊತ್ತ ನೀಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದ್ದು, ಅದನ್ನೂ ತರಿಸಿಕೊಂಡು ಪರಿಶೀಲಿಸಲಾಗಿದೆ. ರಾಜ್ಯದಲ್ಲಿಯೂ ಬಹುಮಾನ ಮೊತ್ತವನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು, ಪರಿಷ್ಕೃತ ಮೊತ್ತವನ್ನು ನಾಳೆ ಘೋಷಿಸಲಾಗುವುದು ಎಂದರು.

ಕೇಂದ್ರದ ಬರ ಅಧ್ಯಯನ ತಂಡದಿಂದ ರಾಜ್ಯಾದ್ಯಂತ ಪರಿಶೀಲನೆ

ಕೇಂದ್ರದ ಬರ ಅಧ್ಯಯನ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದ್ದು, ಅಕ್ಟೋಬರ್ 3ರಿಂದ 6ರವರೆಗೆ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಪ್ರತಿ ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾಗಿರುವ 101 ತಾಲೂಕುಗಳ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಎಂದು ಪರಮೇಶ್ವರ ಹೇಳಿದರು.

ಮುಖ್ಯಮಂತ್ರಿ ಹಾಗೂ ತಾವು ಕೇಂದ್ರದ ತಂಡವನ್ನು ಬರಮಾಡಿಕೊಂಡು ರಾಜ್ಯದ ಬರ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ್ದೇವೆ. ಎರಡನೇ ಹಂತದಲ್ಲಿ ಘೋಷಿಸಿರುವ ಉಳಿದ 77 ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ಅದರಂತೆ ಕೇಂದ್ರದ ತಂಡಗಳು ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ ಎಂದರು.

ಕೆಲವು ಕಡೆ ಕೇಂದ್ರ ತಂಡದ ಸದಸ್ಯರು ರೈತರೊಂದಿಗೆ ನೇರವಾಗಿ ಮಾತನಾಡಿದ್ದು, ಕೃಷಿ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರ ನಡೆಸಿರುವ ಗ್ರೌಂಡ್ ಟ್ರೂಥಿಂಗ್‌ನಲ್ಲಿ ಕಂಡುಬಂದಿರುವ ಪರಿಸ್ಥಿತಿಯನ್ನು ಸ್ಥಳದಲ್ಲಿಯೇ ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೇಂದ್ರ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ವಿವರಿಸಿದ್ದಾರೆ ಎಂದು ತಿಳಿಸಿದರು.

ಕೇಂದ್ರ ತಂಡದ ಪರಿಶೀಲನೆ ಇಂದು ಅಥವಾ ನಾಳೆ ಪೂರ್ಣಗೊಳ್ಳಲಿದ್ದು, ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ಕೇಳಿರುವ ಪರಿಹಾರದ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

ರಾಜ್ಯದ 177 ತಾಲೂಕುಗಳಲ್ಲಿ ₹46 ಸಾವಿರ ಕೋಟಿ ನಷ್ಟ

ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ ಸುಮಾರು ₹46 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಈ ಪೈಕಿ ಸುಮಾರು ₹10 ಸಾವಿರದಿಂದ ₹11 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರದ ಬರ ಅಧ್ಯಯನ ತಂಡಕ್ಕೂ ಈ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ಡಾ. ಪರಮೇಶ್ವರ ಹೇಳಿದರು.

ಕೇಂದ್ರಕ್ಕೆ ಅಂತಿಮವಾಗಿ ಮೆಮೊರಾಂಡಮ್ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ತಾವು ನಿಯೋಗದೊಂದಿಗೆ ತೆರಳುವ ಚಿಂತನೆ ನಡೆಸಿದ್ದೇವೆ. ನಿಯೋಗ ತೆರಳಿದ ಸಂದರ್ಭದಲ್ಲಿಯೂ ರಾಜ್ಯಕ್ಕೆ ಅಗತ್ಯ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಜೀವನ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಕೆಲವು ಸೇವಾ ಶುಲ್ಕ ಏರಿಕೆ

ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಕಗಳನ್ನು ಏಕಾಏಕಿ ಹೆಚ್ಚಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜೀವನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸೇವೆಗಳ ಶುಲ್ಕಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಲವು ಸರ್ಕಾರಿ ಸೇವೆಗಳ ಶುಲ್ಕಗಳನ್ನೂ ಸ್ವಲ್ಪ ಹೆಚ್ಚಿಸುವುದು ಸಹಜ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣದಲ್ಲಿ ಕೊರತೆಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಶುಲ್ಕಗಳನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದರು.

ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಮರುಪರಿಶೀಲನೆ

ಭೂ ಸುಧಾರಣಾ ಕಾಯ್ದೆಯ 79ಎ ಹಾಗೂ 79ಬಿ ಕಲಂಗಳನ್ನು ಮರುಪರಿಶೀಲಿಸುವ ಕುರಿತು ಸಾಕಷ್ಟು ಮನವಿಗಳು ಬಂದಿವೆ. ಹಲವು ಕಾರಣಗಳಿಂದ ಹಿಂದೆ ಈ ಕಲಂಗಳನ್ನು ಕೈಬಿಡಲಾಗಿತ್ತು. ಇದೀಗ ಅವುಗಳನ್ನು ಪುನರ್ ಪರಿಶೀಲಿಸಬೇಕು ಎಂಬ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪರಮೇಶ್ವರ ತಿಳಿಸಿದರು.

ಪರಿಶೀಲನೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಅಗತ್ಯವಿದ್ದರೆ ವಿಷಯವನ್ನು ಸಚಿವ ಸಂಪುಟದ ಮುಂದೆಯೂ ಮಂಡಿಸಲಾಗುವುದು ಎಂದರು.

ಬರದ ಪರಿಣಾಮ ಜಿಎಸ್‌ಟಿ ಸಂಗ್ರಹಕ್ಕೂ ಹೊಡೆತ ಸಾಧ್ಯತೆ

ಕರ್ನಾಟಕವು ನಿರಂತರವಾಗಿ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ರೀತಿಯ ಕೊರತೆ ಅಥವಾ ತಪ್ಪು ಆಗದಂತೆ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿಯೊಂದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿಯೂ ರಾಜ್ಯದ ಪರವಾಗಿ ವಾದ ಮಂಡಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ ಬರ ಪರಿಸ್ಥಿತಿ ಇರುವುದರಿಂದ ಬೆಳೆ ನಷ್ಟವಾಗಿದ್ದು, ಅದರ ಪರಿಣಾಮ ಪ್ರತಿಯೊಂದು ಕ್ಷೇತ್ರದ ಮೇಲೂ ಬೀಳಲಿದೆ. ಸ್ವಾಭಾವಿಕವಾಗಿ ಜಿಎಸ್‌ಟಿ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಈಗಾಗಲೇ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಯಾವ ರೀತಿಯಲ್ಲಿರಲಿದೆ ಎಂಬುದನ್ನು ನೋಡಬೇಕಿದೆ. ಅಗತ್ಯವಾದ ಬಫರ್ ಇಟ್ಟುಕೊಂಡಿದ್ದು, ಜಿಎಸ್‌ಟಿ ಸಂಗ್ರಹ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದರು.

ಫಾರಂ-7 ದುರುಪಯೋಗ: ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ದೂರು

ಫಾರಂ-7 ದುರುಪಯೋಗದ ಕುರಿತು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಫಾರಂ-7 ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದವರನ್ನು ರೆಡ್ ಹ್ಯಾಂಡ್ ಆಗಿ ಪತ್ತೆಹಚ್ಚಿ, ಸಾಕ್ಷ್ಯಗಳ ಸಮೇತ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ ಎಂದು ಡಾ. ಪರಮೇಶ್ವರ ಹೇಳಿದರು.

ಒಬ್ಬ ವ್ಯಕ್ತಿ ಎಷ್ಟು ಫಾರಂ-7 ಅರ್ಜಿಗಳನ್ನು ಸಲ್ಲಿಸಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲವೇ? ಒಬ್ಬರೇ 100, 200 ಅಥವಾ 400 ಅರ್ಜಿಗಳನ್ನು ಸಲ್ಲಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಒಂದೇ ಸಮುದಾಯದವರನ್ನು ಗುರುತಿಸಿಕೊಂಡು ಫಾರಂಗಳನ್ನು ಎಲ್ಲೋ ಮುದ್ರಿಸಿ ತರಲಾಗುತ್ತಿದೆ. ಅವರ ಹೆಸರು ಹಾಗೂ ಮತದಾರರ ಗುರುತಿನ ಚೀಟಿ ವಿವರಗಳು ಮುದ್ರಿತ ಫಾರಂಗಳಲ್ಲಿ ನಮೂದಿಸಿ ಅರ್ಜಿ ಸಲ್ಲಿಸಲಾಗುತ್ತಿದೆ. ಈ ಮಾಹಿತಿಯನ್ನು ಅವರಿಗೆ ಯಾರು ನೀಡಿದ್ದಾರೆ ಮತ್ತು ಡೇಟಾ ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ಮಾಡಬೇಕಿದೆ. ಇದು ಕಾನೂನುಬಾಹಿರವಾಗಿದ್ದು, ಈ ಎಲ್ಲ ಅಂಶಗಳ ಕುರಿತು ಸಾಕ್ಷ್ಯ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದರು.

ಚುನಾವಣಾ ಆಯೋಗವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಏಳು ದಿನಗಳ ಕಾಲಾವಕಾಶ ನೀಡಿದ್ದು, ಬಳಿಕ ಎಫ್‌ಐಆರ್ ದಾಖಲಿಸುವುದಾಗಿ ತಿಳಿಸಿದೆ. ಚುನಾವಣಾ ಆಯೋಗವು ಮುಂದಿನ ಕ್ರಮ ಕೈಗೊಂಡು, ಗುರುತಿಸಿ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಡಾ. ಪರಮೇಶ್ವರ ಒತ್ತಾಯಿಸಿದರು.

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ.

Leave a Reply

Your email address will not be published. Required fields are marked *