ಕರ್ನಾಟಕದಲ್ಲಿ ಬರ ಪರಿಸ್ಥಿತಿ ತೀವ್ರ: ಪ್ರಧಾನಿ ಮೋದಿಗೆ ಸಿ ಎಂ,ಡಿಕೆಶಿ ಪತ್ರ

Spread the love

ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ರಾಜ್ಯದಲ್ಲಿ ಒಟ್ಟು 177 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ತುರ್ತು ಬರ ಪರಿಹಾರ ಕ್ರಮಗಳಿಗಾಗಿ ಕೇಂದ್ರ ಸರ್ಕಾರದಿಂದ ಮಧ್ಯಂತರ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 23ರಂದು ಪ್ರಧಾನಮಂತ್ರಿಗೆ ಬರೆದಿರುವ ಪತ್ರದಲ್ಲಿ, ಖಾರಿಫ್ 2026ರ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 10ರಂದು ಸಲ್ಲಿಸಿದ್ದ ಮನವಿಯನ್ನು ಉಲ್ಲೇಖಿಸಿರುವ ಮುಖ್ಯಮಂತ್ರಿ, 101 ಬರಪೀಡಿತ ತಾಲೂಕುಗಳಿಗೆ ತುರ್ತು ಬರ ಪರಿಹಾರ ಕ್ರಮಗಳಿಗಾಗಿ ₹3,705.30 ಕೋಟಿ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಬರ ನಿರ್ವಹಣೆ ಕೈಪಿಡಿ-2020ರಲ್ಲಿ ನಿಗದಿಪಡಿಸಿರುವ ಮಾನದಂಡಗಳ ಅನ್ವಯ ನಡೆಸಿದ ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಹೆಚ್ಚುವರಿಯಾಗಿ 76 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ನೈಋತ್ಯ ಮುಂಗಾರು-2026ರ ಅವಧಿ ಪೂರ್ಣಗೊಳ್ಳುವ ವೇಳೆಗೆ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿಯಾಗಿ ಬರಪೀಡಿತವೆಂದು ಘೋಷಿಸಲಾದ ತಾಲೂಕುಗಳಲ್ಲಿ ಉಂಟಾಗಿರುವ ನಷ್ಟ ಹಾಗೂ ಹಾನಿಯ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಈ ಮೌಲ್ಯಮಾಪನ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ ಹೆಚ್ಚುವರಿ ಆರ್ಥಿಕ ನೆರವು ಕೋರಿ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕರ್ನಾಟಕದ ಪ್ರಮುಖ ಮಳೆಗಾಲವಾಗಿರುವ ನೈಋತ್ಯ ಮುಂಗಾರು ಅವಧಿಯಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ದೊರೆಯುವ ಮಳೆಯು ಖಾರಿಫ್ ಕೃಷಿ, ಜಲಾಶಯಗಳ ನೀರು ಸಂಗ್ರಹ, ಜಲವಿದ್ಯುತ್ ಉತ್ಪಾದನೆ, ಜಾನುವಾರುಗಳಿಗೆ ಮೇವಿನ ಲಭ್ಯತೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಪ್ರಮುಖವಾಗಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ಉಂಟಾಗಿರುವ ಮಳೆಯ ಕೊರತೆಯಿಂದ ಈ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳಲ್ಲಿನ ಕಡಿಮೆ ನೀರಿನ ಸಂಗ್ರಹ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಮುಂಬರುವ ತಿಂಗಳುಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ನೈಋತ್ಯ ಮುಂಗಾರು ಅಂತಿಮ ಹಂತಕ್ಕೆ ಪ್ರವೇಶಿಸುತ್ತಿದ್ದರೂ ರಾಜ್ಯದಲ್ಲಿ ಒಟ್ಟಾರೆ ಮಳೆಯ ಕೊರತೆ ಮುಂದುವರಿದಿರುವುದರಿಂದ ಮುಂದಿನ ತಿಂಗಳುಗಳಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡು ಬೇಸಿಗೆ ಅವಧಿಯಲ್ಲಿ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಮಳೆ ಹಾಗೂ ಮಣ್ಣಿನ ತೇವಾಂಶದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ 40 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆಳೆ ಹಾಗೂ ಇತರ ನಷ್ಟಗಳ ನೈಜ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರದ ಅಂತರ ಸಚಿವಾಲಯ ತಂಡವನ್ನು (IMCT) ರಾಜ್ಯಕ್ಕೆ ಕಳುಹಿಸುವ ಪ್ರಸ್ತಾವನೆ ಇದ್ದು, ತಂಡದ ವರದಿಯನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯ ಮುಂದೆ ಹಾಗೂ ಬಳಿಕ ಉನ್ನತ ಮಟ್ಟದ ಸಮಿತಿಯ ಪರಿಗಣನೆ ಮತ್ತು ಅನುಮೋದನೆಗಾಗಿ ಮಂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಬರ ಪರಿಸ್ಥಿತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಬೇಕಾಗುವುದರಿಂದ, ನಿಗದಿತ ಮೌಲ್ಯಮಾಪನ ಮತ್ತು ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯದೆ, ಮನವಿ ಮಾಡಿರುವ ಒಟ್ಟು ಮೊತ್ತದ ಶೇ.50ರಷ್ಟು ಹಣವನ್ನು ಮಧ್ಯಂತರ ಆರ್ಥಿಕ ನೆರವಿನ ರೂಪದಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಪ್ರಧಾನಮಂತ್ರಿಗೆ ಮನವಿ ಮಾಡಿದ್ದಾರೆ.

ಈ ಮಧ್ಯಂತರ ನೆರವಿನಿಂದ ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಇನ್‌ಪುಟ್ ಸಬ್ಸಿಡಿ, ಕುಡಿಯುವ ನೀರು ಪೂರೈಕೆ, ಜಾನುವಾರುಗಳ ರಕ್ಷಣೆ ಹಾಗೂ ಇತರ ಅಗತ್ಯ ಬರ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನೆರವಾಗಲಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಸಮಯೋಚಿತ ನೆರವು ಒದಗಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ, ರಾಜ್ಯದಲ್ಲಿ ಉದ್ಭವಿಸಿರುವ ಬರ ಪರಿಸ್ಥಿತಿಯನ್ನು ಪರಿಗಣಿಸಿ, ರಾಜ್ಯ ವಿಪತ್ತು ಪರಿಹಾರ ನಿಧಿ (SDRF)ಯ ಎರಡನೇ ಕಂತಿನ ಕೇಂದ್ರದ ಪಾಲನ್ನೂ ಮುಂಚಿತವಾಗಿ ಬಿಡುಗಡೆ ಮಾಡುವಂತೆ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *