
ಬೆಂಗಳೂರು: ರಾಜ್ಯದ ಬರಪೀಡಿತ ರೈತರ ಸಂಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸಲಿದೆ. ಅರ್ಹ ಪ್ರತಿಯೊಬ್ಬ ಬರಪೀಡಿತ ರೈತನಿಗೂ ಕನಿಷ್ಠ ₹5,000 ಬೆಳೆ ನಷ್ಟ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದ್ದು, ರೈತರಿಗೆ ನ್ಯಾಯಯುತವಾಗಿ, ಪಾರದರ್ಶಕವಾಗಿ ಹಾಗೂ ಗೌರವಯುತವಾಗಿ ಪರಿಹಾರ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಬರ ಪರಿಹಾರದ ಮೊದಲ ಕಂತಿನಲ್ಲಿ ನಿರೀಕ್ಷಿತ ₹2,500 ಬದಲಾಗಿ ಕೆಲವು ರೈತರ ಖಾತೆಗಳಿಗೆ ₹2,000 ಜಮೆಯಾಗಿರುವ ಕುರಿತು ವ್ಯಕ್ತವಾಗಿರುವ ಆಕ್ಷೇಪಣೆಗಳಿಗೆ ಸ್ಪಷ್ಟನೆ ನೀಡಿರುವ ಅವರು, ರೈತರಿಗೆ ಜಮೆಯಾಗಿರುವ ₹2,000 ಅಂತಿಮ ಪರಿಹಾರವಲ್ಲ. ಸರ್ಕಾರದ ನಿರ್ಧಾರದಂತೆ ಅರ್ಹ ಪ್ರತಿಯೊಬ್ಬ ರೈತನಿಗೂ ಕನಿಷ್ಠ ₹5,000 ನೆರವು ನೀಡಲಾಗುವುದು. ಮೊದಲ ಕಂತಿನಲ್ಲಿ ₹2,000 ಪಡೆದ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ ಇರುವ ₹3,000 ಬಿಡುಗಡೆ ಮಾಡಲಾಗುವುದು. ಅದೇ ರೀತಿ ಮೊದಲ ಕಂತಿನಲ್ಲಿ ₹2,500 ಪಡೆದವರಿಗೆ ಹೆಚ್ಚುವರಿಯಾಗಿ ₹2,500 ನೀಡುವ ಮೂಲಕ ಒಟ್ಟು ₹5,000 ಪರಿಹಾರ ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
2026ರ ಅಕ್ಟೋಬರ್ 23ರಂದು ಹೊರಡಿಸಿದ ಸರ್ಕಾರಿ ಆದೇಶದಂತೆ ಬರ ಪರಿಹಾರದ ಮೊದಲ ಕಂತಾಗಿ ಅರ್ಹ ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ನವೆಂಬರ್ 5ರಂದು ಯಾದಗಿರಿ ಜಿಲ್ಲೆಯಲ್ಲಿ 1,06,462 ರೈತರಿಗೆ ಒಟ್ಟು ₹17.43 ಕೋಟಿ ನೆರವು ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಣ್ಣ ಹಿಡುವಳಿದಾರ ರೈತರಿಗೆ ಪರಿಹಾರ ವಿತರಣೆಯಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಬೆಳೆ ನಷ್ಟದ ಪರಿಹಾರವನ್ನು ಕೃಷಿ ಭೂಮಿಯ ವಿಸ್ತೀರ್ಣ ಹಾಗೂ ಬೆಳೆ ವರ್ಗದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅದರಂತೆ ಮಳೆಯಾಶ್ರಿತ ಬೆಳೆಗಳಿಗೆ ಕನಿಷ್ಠ ₹1,500, ನೀರಾವರಿ ಬೆಳೆಗಳಿಗೆ ₹2,600 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹3,200 ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಮುಖ್ಯಮಂತ್ರಿ ಹಾಗೂ ತಾವು ಈ ನಿಯಮಗಳನ್ನು ಮೀರಿ ಅರ್ಹ ಪ್ರತಿಯೊಬ್ಬ ರೈತನಿಗೂ ಕನಿಷ್ಠ ₹5,000 ಬೆಳೆ ನಷ್ಟ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಧ ಎಕರೆ ಜಮೀನು ಹೊಂದಿರುವ ರೈತನೂ ಬರದಿಂದ ಸಂಕಷ್ಟ ಅನುಭವಿಸುತ್ತಾನೆ. ಹಲವು ಎಕರೆ ಜಮೀನು ಹೊಂದಿರುವ ರೈತನೂ ಅದೇ ರೀತಿ ಸಂಕಷ್ಟಕ್ಕೆ ಸಿಲುಕುತ್ತಾನೆ. ಹೀಗಾಗಿ ರೈತನ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಸರ್ಕಾರದ ಕಾಳಜಿ ನಿರ್ಧಾರವಾಗಬಾರದು. ಕನಿಷ್ಠ ₹5,000 ಪರಿಹಾರದ ಜೊತೆಗೆ ಬೆಳೆ ನಷ್ಟದ ಪ್ರಮಾಣ ಮತ್ತು ಅನ್ವಯವಾಗುವ ನಿಯಮಗಳ ಆಧಾರದ ಮೇಲೆ ಅರ್ಹ ರೈತರಿಗೆ ₹5,000ರಿಂದ ₹60,000ವರೆಗೆ ಹೆಚ್ಚುವರಿ ಇನ್ಪುಟ್ ಸಬ್ಸಿಡಿ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.
ಪರಿಹಾರ ವಿತರಣೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಾಕಿ ಇರುವ ಪರಿಹಾರದ ಕಂತುಗಳನ್ನು ಶೀಘ್ರ ಬಿಡುಗಡೆ ಮಾಡಬೇಕು ಹಾಗೂ ಅರ್ಹ ಯಾವುದೇ ರೈತ ನೆರವಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿರುವುದಾಗಿ ಹೇಳಿದ್ದಾರೆ. ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ನಿಯಮಗಳು ಅಡ್ಡಿಯಾಗಬಾರದು. ಪ್ರಸ್ತುತ ಮಾರ್ಗಸೂಚಿಗಳು ರೈತರ ಸಂಕಷ್ಟಕ್ಕೆ ಸೂಕ್ತ ಪರಿಹಾರ ನೀಡಲು ಸಾಕಾಗದಿದ್ದಲ್ಲಿ ಅವರ ಹಿತ ಕಾಪಾಡಲು ಸರ್ಕಾರ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದಿದ್ದಾರೆ.
ಇದೇ ವೇಳೆ ಪರಿಹಾರದ ವಿಚಾರವಾಗಿ ವದಂತಿ, ತಪ್ಪು ಮಾಹಿತಿ ಹಾಗೂ ರಾಜಕೀಯ ಉದ್ದೇಶದ ಗೊಂದಲಗಳಿಗೆ ರೈತರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಮಧ್ಯಂತರವಾಗಿ ಬಿಡುಗಡೆಯಾದ ಪರಿಹಾರವನ್ನೇ ಅಂತಿಮ ನೆರವು ಎಂದು ಬಿಂಬಿಸಿ ರೈತರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ರೈತರ ನೈಜ ಸಮಸ್ಯೆಗಳನ್ನು ಸರ್ಕಾರ ಮುಕ್ತವಾಗಿ ಸ್ವೀಕರಿಸಲಿದ್ದು, ಅರ್ಹ ರೈತರಿಗೆ ಕಡಿಮೆ ಪರಿಹಾರ ಬಂದಿದ್ದರೆ ಅಥವಾ ಮುಂದಿನ ಕಂತು ಪಡೆಯುವಲ್ಲಿ ಸಮಸ್ಯೆಯಿದ್ದರೆ ಪರಿಶೀಲಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ರೈತರಿಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಸಮಯಕ್ಕೆ ಸರಿಯಾಗಿ ಪರಿಹಾರ, ಆರ್ಥಿಕ ಭದ್ರತೆ ಹಾಗೂ ಸರ್ಕಾರ ತಮ್ಮೊಂದಿಗಿದೆ ಎಂಬ ವಿಶ್ವಾಸ ಮುಖ್ಯ. ಮುಖ್ಯಮಂತ್ರಿ ಹಾಗೂ ತಾವು ರೈತರ ಸಂಕಷ್ಟದ ಸಂದರ್ಭದಲ್ಲಿ ಸದಾ ಅವರ ಬೆನ್ನಿಗೆ ನಿಲ್ಲುತ್ತೇವೆ. ರೈತರ ಅಹವಾಲುಗಳನ್ನು ಆಲಿಸಿ, ಲೋಪದೋಷಗಳನ್ನು ಸರಿಪಡಿಸಿ, ಅವರಿಗೆ ತಲುಪಬೇಕಾದ ನೆರವನ್ನು ತಲುಪಿಸುವುದು ಸರ್ಕಾರದ ಬದ್ಧತೆಯಾಗಿದೆ. ಅರ್ಹ ಪ್ರತಿಯೊಬ್ಬ ರೈತನಿಗೂ ಕನಿಷ್ಠ ₹5,000 ಪರಿಹಾರ, ಬಾಕಿ ಕಂತುಗಳ ಶೀಘ್ರ ಬಿಡುಗಡೆ ಹಾಗೂ ಸಣ್ಣ ಹಿಡುವಳಿದಾರರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
