ಜನವರಿ ಮೊದಲ ವಾರದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಲು ಸರ್ಕಾರದ ಸಿದ್ಧತೆ

Spread the love

ಬೆಂಗಳೂರು: ಜಿಲ್ಲಾ ಪಂಚಾಯಿತಿ (ಜಿಪಂ) ಹಾಗೂ ತಾಲೂಕು ಪಂಚಾಯಿತಿ (ತಾಪಂ) ಚುನಾವಣೆ ನಡೆಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ವಾರ್ಡ್‌ವಾರು ಮೀಸಲಾತಿ ಪಟ್ಟಿಗೆ ರಾಜ್ಯ ಚುನಾವಣಾ ಆಯೋಗ ಒಪ್ಪಿಗೆ ನೀಡಿದರೆ ಜನವರಿ ಮೊದಲ ವಾರದಲ್ಲಿ ಜಿಪಂ ಹಾಗೂ ತಾಪಂ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರವು ಜಿಪಂ ಹಾಗೂ ತಾಪಂ ವಾರ್ಡ್‌ವಾರು ಮೀಸಲಾತಿ ಪಟ್ಟಿಗೆ ಅನುಮೋದನೆ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಸದ್ಯ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಮೀಸಲಾತಿ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಕೇಂದ್ರ ಚುನಾವಣಾ ಆಯೋಗದಿಂದ ಅನುಮೋದನೆ ದೊರೆತ ಬಳಿಕ ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಲಾಗುವುದು.

ಕರಡು ಅಧಿಸೂಚನೆ ಪ್ರಕಟಿಸಿದ ಬಳಿಕ ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ಪರಿಗಣಿಸಿ ಡಿಸೆಂಬರ್ ಮಧ್ಯಭಾಗದಲ್ಲಿ ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಅಂತಿಮ ಅಧಿಸೂಚನೆ ಪ್ರಕಟಿಸಲು ಸರ್ಕಾರ ಉದ್ದೇಶಿಸಿದೆ. ನಂತರ ಜನವರಿ ಮೊದಲ ವಾರದಲ್ಲಿ ಜಿಪಂ ಹಾಗೂ ತಾಪಂ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

ಜಿಪಂ ಹಾಗೂ ತಾಪಂ ಚುನಾವಣೆ ನಡೆದ 15 ದಿನಗಳ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *