
ಬೆಂಗಳೂರು: ಖಾಸಗಿ ಶಾಲೆಗಳು ಹಾಗೂ ಅಲ್ಲಿನ ಶಿಕ್ಷಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ರುಪ್ಸಾ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಆತ್ಮಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರು ತಮ್ಮ ಜೀವನವನ್ನು ಮಕ್ಕಳ ಭವಿಷ್ಯ ರೂಪಿಸಲು ಮುಡಿಪಾಗಿಟ್ಟಿದ್ದು, ಅವರ ಶ್ರಮ, ಸೇವೆ ಹಾಗೂ ಗೌರವವನ್ನು ಹಗುರವಾಗಿ ಕಾಣುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿರುವವರು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಹ ಜವಾಬ್ದಾರಿಯುತ ಮಾತುಗಳನ್ನು ಆಡಬೇಕು. ಯಾವುದೇ ಸಮುದಾಯದ ಶಿಕ್ಷಕರ ಮನಸ್ಸಿಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡುವುದು ಖಂಡನೀಯ ಎಂದು ಹೇಳಿದ್ದಾರೆ.
ಮುಕುಂದರಾಜ್ ಅವರು ಖಾಸಗಿ ಶಾಲಾ ಶಿಕ್ಷಕರಿಗೆ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದರೆ, ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಶಿಕ್ಷಕರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ರಾಜ್ಯಾದ್ಯಂತ ಖಾಸಗಿ ಶಾಲಾ ಶಿಕ್ಷಕರು ಒಗ್ಗಟ್ಟಾಗಿ ಶಾಂತಿಯುತ ಹಾಗೂ ಕಾನೂನುಬದ್ಧ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದು ಯಾವುದೇ ವ್ಯಕ್ತಿಯ ವಿರುದ್ಧದ ದ್ವೇಷದ ಹೋರಾಟವಲ್ಲ. ಬದಲಾಗಿ ಶಿಕ್ಷಕರನ್ನು ಅವಮಾನಿಸುವ ಹೇಳಿಕೆಗಳ ವಿರುದ್ಧದ ಹೋರಾಟವಾಗಿದೆ. ಖಾಸಗಿ ಶಾಲಾ ಶಿಕ್ಷಕರ ಗೌರವವೇ ನಮ್ಮ ಗೌರವವಾಗಿದ್ದು, ಶಿಕ್ಷಕರ ಆತ್ಮಗೌರವಕ್ಕೆ ಧಕ್ಕೆ ತರುವ ಯಾವುದೇ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ರುಪ್ಸಾ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಡೇಮನಿ, ರಾಜ್ಯ ಸಹ ಜಂಟಿ ಕಾರ್ಯದರ್ಶಿ ನಾಗರಾಜ್ ಧಾರವಾಡಶೇಟ್ರ, ರಾಜ್ಯ ನಿರ್ದೇಶಕರಾದ ಹುತ್ತನಗೌಡ ತೆಂಬದಮನಿ, ಶ್ರೀಮತಿ ಅಕ್ಕಮಾ ಕುಂಬಾರ, ಜಿಲ್ಲಾ ಅಧ್ಯಕ್ಷ ರಮೇಶ್ ಬರಮಗೌಡ ಸೇರಿದಂತೆ ಹಲವು ಪದಾಧಿಕಾರಿಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

