
ಕುಂದಗೋಳ: ಕೆಎಸ್ಆರ್ಟಿಸಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಬಳಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಇಂದು ಬೆಳಗ್ಗೆಯ ವೇಳೆಯಲ್ಲಿ ಸುಮಾರು 7 ರಿಂದ 8 ಕೆಎಸ್ಆರ್ಟಿಸಿ ಬಸ್ಸುಗಳನ್ನು ತಡೆದು ನಿಲ್ಲಿಸಿದ ಪ್ರತಿಭಟನಾಕಾರರು, ರಸ್ತೆ ತಡೆ ನಡೆಸಿ ಸಾರಿಗೆ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಪ್ರತಿದಿನ ಕೆಲಸ ಕಾರ್ಯಗಳಿಗೆ ತೆರಳುವ ಕೂಲಿ ಕಾರ್ಮಿಕರು, ನೌಕರರು ಹಾಗೂ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ಗಳಿಲ್ಲದೆ ಪರದಾಡುವಂತಾಗಿದೆ. ಈ ಮಾರ್ಗದಲ್ಲಿ ಹೆಚ್ಚುವರಿಯಾಗಿ ಮೂರು ಬಸ್ಸುಗಳನ್ನು ಓಡಿಸಬೇಕು ಎಂದು ಸಂಬಂಧಪಟ್ಟ ಕೆಎಸ್ಆರ್ಟಿಸಿ ಡೆಪೋ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಕನಿಷ್ಠ ಸೌಜನ್ಯಕ್ಕೂ ಸ್ಪಂದಿಸದೆ ಮೃತಿಯ ಧೋರಣೆ ತಳೆದಿದ್ದಾರೆ ಎಂದು ಗ್ರಾಮಸ್ಥರು ಕಟುವಾಗಿ ಖಂಡಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವ ಹುಬ್ಬಳ್ಳಿ ಹಾಗೂ ಲಕ್ಷ್ಮೇಶ್ವರ ಕೆಎಸ್ಆರ್ಟಿಸಿ ಡೆಪೋ ಅಧಿಕಾರಿಗಳ ಕಣ್ಣೊರೆಸುವ ತಂತ್ರಕ್ಕೆ ಈಗ ತಕ್ಕ ಪಾಠ ಕಲಿಸಲು ಸಾರ್ವಜನಿಕರು ರಸ್ತೆಗಿಳಿದಿದ್ದಾರೆ. ಹತ್ತಾರು ಬಾರಿ ಮನವಿ ಕೊಟ್ಟರೂ ಕ್ಯಾರೇ ಎನ್ನದ ಅಧಿಕಾರಿಗಳ ಹಠಮಾರಿ ಧೋರಣೆಯೇ ಈ ದಿಢೀರ್ ಪ್ರತಿಭಟನೆಗೆ ನೇರ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತು ತಕ್ಷಣವೇ ಸರಿಯಾದ ಸಮಯಕ್ಕೆ ಹೆಚ್ಚಿನ ಬಸ್ಸುಗಳನ್ನು ಓಡಿಸಿ ಅನುಕೂಲ ಮಾಡಿಕೊಡುತ್ತಾರೋ ಅಥವಾ ಸಾರ್ವಜನಿಕರ ಆಕ್ರೋಶದ ಬಿಸಿಯನ್ನು ಮತ್ತಷ್ಟು ಎದುರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

