ಶಿಕ್ಷಕರ ಕೊರತೆ: ರಾಣೇಬೆನ್ನೂರ ತಾಲ್ಲೂಕಿನ ಚಿಕ್ಕ ಅರಳಿಹಳ್ಳಿ ಶಾಲೆ ಬಂದ್ ಮಾಡಿ ಪ್ರತಿಭಟನೆ

Spread the love

ರಾಣೇಬೆನ್ನೂರ: ತಾಲ್ಲೂಕಿನ ಚಿಕ್ಕ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು, ಪಾಲಕರು, ಪೋಷಕರು, ಶಾಲಾ ಮಕ್ಕಳು ಹಾಗೂ ಎಸ್‌ಡಿಎಂಸಿ ಸದಸ್ಯರು ಬುಧವಾರದಂದು ಶಾಲೆ ಬಂದ್ ಮಾಡಿ ಸುಮಾರು ನಾಲ್ಕು ಗಂಟೆಗಳ ಕಾಲ ತೀವ್ರ ಪ್ರತಿಭಟನೆ ನಡೆಸಿದರು.

ಒಂದರಿಂದ ಎಂಟನೇ ತರಗತಿವರೆಗೆ ಒಟ್ಟು 111 ಮಕ್ಕಳು ಕಲಿಯುತ್ತಿದ್ದು, ದೀರ್ಘಕಾಲದಿಂದ ಕಾಡುತ್ತಿರುವ ಶಿಕ್ಷಕರ ಕೊರತೆಯಿಂದಾಗಿ ಪಾಠ ಬೋಧನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದು ಮಕ್ಕಳ ಭವಿಷ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಶಾಲೆಯ ಎದುರು ಜಮಾಯಿಸಿ ಶಿಕ್ಷಣ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಹಿಂದೆ ಇದೇ ವಿಚಾರವಾಗಿ ನಾವು ಪ್ರಶ್ನಿಸಿದಾಗ “ನಿಮ್ಮ ಇಷ್ಟ ಬಂದಂತೆ ಶಾಲೆ ಬಂದ್ ಮಾಡಿಕೊಳ್ಳಿ” ಎಂದು ಉಡಾಪೆ ಉತ್ತರ ನೀಡಿದ್ದೀರಿ. ಈಗ ನಾವು ಶಾಲೆ ಬಂದ್ ಮಾಡಿದ್ದೇವೆ. ತಕ್ಷಣವೇ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವವರೆಗೂ ಶಾಲೆಯ ಬೀಗ ತೆಗೆಯುವುದಿಲ್ಲ. ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪಟ್ಟು ಹಿಡಿದರು.

ಈ ವೇಳೆ ಸಾರ್ವಜನಿಕರ ಮನವೊಲಿಸಲು ಯತ್ನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಡಿಗ ಅವರು, ಇದುವರೆಗಿನ ಲೋಪಗಳನ್ನು ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೂ ಸ್ಪಂದಿಸಬೇಕು ಎಂದು ವಿನಂತಿಸಿದರು. ಇಲಾಖೆಯ ನಿಯಮಾನುಸಾರ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿಯೇ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಹಾಗೂ ಸದ್ಯದ ಪರಿಸ್ಥಿತಿ ನಿಭಾಯಿಸಲು ನಾಳೆಯಿಂದಲೇ ಓರ್ವ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿ ಹಿಂಪಡೆದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಿವಾಜಿ ನನ್ನೂರಿ, ಉಪಾಧ್ಯಕ್ಷ ಬಸವರಾಜ ಮಡಿವಾಳರ, ಸದಸ್ಯರಾದ ಮುತ್ತೇಶ ಲಮಾಣಿ, ಬಸವರಾಜ ಮೇವುಂಡಿ, ಅಜ್ಜಪ್ಪ ಲಮಾಣಿ, ವಿಜಯ ಹುಲ್ಯಾಳ, ಲಲಿತಾ ಬಜ್ಜಳ್ಳಿ, ದೇವಿರವ್ವ ಕಜ್ಜರಿ, ನಿಂಗರಾಜ ಮೇವುಂಡಿ, ಗೋಣೆಪ್ಪ ಕತ್ತೆಬೆನ್ನೂರ, ದಿನೇಶ ಬೂದಗಟ್ಟಿ ಹಾಗೂ ಗ್ರಾಮದ ಪ್ರಮುಖರಾದ ಪ್ರಕಾಶ ಶಿವಪುರ, ಲಕ್ಷ್ಮಣ ಲಮಾಣಿ, ಸೋಮಶೇಖರ ಲಮಾಣಿ, ರಾಮಣ್ಣ ರಡ್ಡೇರ, ಚಂದ್ರು ಲಮಾಣಿ, ಪರಮೇಶ ಬೂದಗಟ್ಟಿ, ಹುಸೇನಸಾಬ ಕೂರಗುಂದ, ನಾಗರಾಜ ಲಮಾಣಿ, ಮಾರುತಿ ಇಟಗಿ ಸೇರಿದಂತೆ ಪಾಲಕರು, ಪೋಷಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಮಂಜಾನಾಯಕ ಮತ್ತು ಗಂಗಪ್ಪ ಸ್ಥಳದಲ್ಲಿದ್ದರು.

Leave a Reply

Your email address will not be published. Required fields are marked *