
ಹನೂರು: ಪ್ರಕೃತಿಯ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿಗರಿಗೆ ಕಾಡಾನೆಯೊಂದು ಸಿಂಹಸ್ವಪ್ನವಾದ ಘಟನೆ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿ ಸಂಭವಿಸಿದೆ. ಕಾವೇರಿ ನದಿಯ ದಡದಲ್ಲಿ ಪ್ರವಾಸಿಗರು ಆಟವಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಾಡಾನೆಯೊಂದು ದಾಳಿ ನಡೆಸಿದ್ದು, ಪ್ರಾಣಾಪಾಯದಿಂದ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಸಂಗಮಕ್ಕೆ ಆಗಮಿಸಿದ್ದ ಪ್ರವಾಸಿಗರ ತಂಡವೊಂದು ಮೇಕೆದಾಟು ಬಳಿಯ ನದಿಯಲ್ಲಿ ಜಲಕ್ರೀಡೆ ಆಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿತ್ತು. ಇದೇ ಸಮಯದಲ್ಲಿ ನೀರು ಕುಡಿಯಲು ಬಂದಿದ್ದ ಕಾಡಾನೆಯು ಪ್ರವಾಸಿಗರ ಗದ್ದಲಕ್ಕೆ ಕೆರಳಿ ಏಕಾಏಕಿ ಅವರ ಮೇಲೆ ಎರಗಿದೆ. ಆನೆಯು ವೇಗವಾಗಿ ಧಾವಿಸಿ ಬರುತ್ತಿದ್ದಂತೆ ಭಯಭೀತರಾದ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಗಡಿಬಿಡಿಯಲ್ಲಿ ಕೆಳಕ್ಕೆ ಬಿದ್ದು ಓರ್ವ ಮಹಿಳಾ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
ಕಾಡಾನೆಯು ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದ ರೋಚಕ ಹಾಗೂ ಭೀಕರ ದೃಶ್ಯಗಳನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯು ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯದ ಅಂಚಿನ ಭಾಗಗಳಲ್ಲಿ ಅಥವಾ ನದಿ ತೀರದಲ್ಲಿ ಜಾಗರೂಕತೆಯಿಂದ ಇರುವಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.
ವರದಿ: ಕಾರ್ತಿಕ್ ಗೌಡ, ಹನೂರು.

