
ಹನೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹನೂರು ತಾಲೂಕಿನಲ್ಲಿ 2026ರ ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಆರಂಭಗೊಂಡಿದ್ದು, ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿ ಮುನಿರಾಜು ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 2,24,616 ಮತದಾರರಿದ್ದು, ಪರಿಷ್ಕರಣೆಯ ಪೂರ್ವ ಅರ್ಹತಾ ಅವಧಿಯನ್ನು 2026ರ ಜೂನ್ 30ರಿಂದ ಆಗಸ್ಟ್ 8ರವರೆಗೆ ನಿಗದಿಪಡಿಸಲಾಗಿದೆ. ಇದೇ ಅವಧಿಯಲ್ಲಿ ಗೃಹಗೃಹ ಸಮೀಕ್ಷೆ ಕಾರ್ಯವೂ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಜುಲೈ 17, 2026ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳು ಹಾಗೂ ಹಕ್ಕು ದಾವೆಗಳನ್ನು ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಸಲ್ಲಿಸಬಹುದಾಗಿದ್ದು, ಅರ್ಜಿಗಳ ವಿಲೇವಾರಿಯನ್ನು ಅಕ್ಟೋಬರ್ 15ರೊಳಗೆ ಪೂರ್ಣಗೊಳಿಸಿ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 19, 2026ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಹನೂರು ತಾಲೂಕಿನ 2,24,616 ಅರ್ಹ ಮತದಾರರ ಪೈಕಿ 2,03,520 ಜನರ ಇ-ಕೆವೈಸಿ (EF) ಪೂರ್ಣಗೊಂಡಿದ್ದು, ಶೇ.90.61ರಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಲದೆ, 100 ವರ್ಷ ಮೇಲ್ಪಟ್ಟ 18 ಮತದಾರರು, ASSD ವರ್ಗಕ್ಕೆ ಸೇರಿದ 21,049 (ಶೇ.9.37) ಮತದಾರರು, 6,472 ಮರಣ ಪ್ರಕರಣಗಳು, 11,271 ಶಾಶ್ವತ ಸ್ಥಳಾಂತರಗಳು, 2,754 ಡಬಲ್ ಎಂಟ್ರಿಗಳು, 515 ಗೈರುಹಾಜರಿ ಹಾಗೂ 37 ಇತರೆ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಹೆಸರು ತೆಗೆದುಹಾಕುವ ಅಗತ್ಯವಿರುವ ಸಾರ್ವಜನಿಕರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹನೂರು ತಹಶೀಲ್ದಾರ್ ಚೈತ್ರಾ, ಉಪ ತಹಶೀಲ್ದಾರ್ ಸುರೇಖ, ಅಧಿಕಾರಿಗಳಾದ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

