
ಹನೂರು: ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು, ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರ ಪರಿಶ್ರಮ ಪಡಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.
ಹನೂರು ತಾಲೂಕಿನ ಆರ್.ಎಸ್. ದೊಡ್ಡಿಯ ಕನಕ ಭವನದಲ್ಲಿ ತಾಲೂಕು ಕುರುಬರ ಸಂಘ ಹಾಗೂ ಕನಕ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ನಾನು ವೈದ್ಯ, ಐಎಎಸ್ ಅಧಿಕಾರಿ, ಶಿಕ್ಷಕ ಅಥವಾ ಪೊಲೀಸ್ ಅಧಿಕಾರಿಯಾಗುತ್ತೇನೆ ಎಂದು ಹೇಳಿದರೆ ಸಾಲದು. ಆಯ್ದುಕೊಂಡ ಗುರಿಯನ್ನು ಸಾಧಿಸುವವರೆಗೂ ಅದರಿಂದ ಹಿಂದೆ ಸರಿಯದೆ ಶ್ರದ್ಧೆ ಮತ್ತು ಪರಿಶ್ರಮದಿಂದ ಮುನ್ನಡೆಯಬೇಕು. ವಿದ್ಯಾರ್ಥಿಗಳ ಸಾಧನೆ ಪೋಷಕರಿಗೆ ಹೆಮ್ಮೆ ತರುವಂತಿರಬೇಕು” ಎಂದು ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಪುಸ್ತಕಗಳ ಓದು ಮಾತ್ರ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳುವುದರ ಜೊತೆಗೆ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ನಿರಂತರ ಓದು ಮತ್ತು ಜ್ಞಾನವೃದ್ಧಿಯಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ಸಮಾಜದ ಕಾರ್ಯಕ್ರಮಗಳಿಗೆ 10ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನೂ ಕರೆತರಬೇಕು. ಇದರಿಂದ ಅವರಿಗೆ ಸಮಾಜದ ಬಗ್ಗೆ ಅರಿವು ಮೂಡಲಿದ್ದು, ಹಿರಿಯರ ಅನುಭವ ಮತ್ತು ಮಾರ್ಗದರ್ಶನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಫೆಬ್ರವರಿಯಲ್ಲಿ ಕನಕ ಭವನ ಉದ್ಘಾಟನೆಗೆ ಚಿಂತನೆ
ಕನಕ ಭವನದ ನಿರ್ಮಾಣ ಕಾರ್ಯದ ಕುರಿತು ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭವನದ ನಿರ್ಮಾಣಕ್ಕೆ ₹2 ಕೋಟಿ ಅನುದಾನ ದೊರೆತಿದೆ. ಈ ಭವನ ಬಡವರ ಮದುವೆ ಹಾಗೂ ಸಮಾಜದ ವಿವಿಧ ಕಾರ್ಯಕ್ರಮಗಳಿಗೆ ಉಪಯುಕ್ತವಾಗಬೇಕು. ಫೆಬ್ರವರಿಯಲ್ಲಿ ಶುಭ ಮುಹೂರ್ತದಲ್ಲಿ ಭವನವನ್ನು ಉದ್ಘಾಟಿಸುವ ಉದ್ದೇಶವಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಪ್ಪ, ಮುಖಂಡ ವೆಂಕಟೇಗೌಡ, ನಾಗರಾಜು, ಉಪಾಧ್ಯಕ್ಷ ಮಲ್ಲಣ್ಣ, ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಮುಖ್ಯ ಅತಿಥಿಗಳಾದ ಬಸವರಾಜು, ನಾಗರಾಜು, ಹುಚ್ಚಯ್ಯ, ಪುಟ್ಟಸ್ವಾಮಿ, ರಾಜು, ನಂಜುಂಡಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಸಮಾಜದ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

