News

ಗ್ರಾಮಸ್ಥರ ಬಹುದಿನದ ಕನಸು ನನಸು: ವಡ್ಡರದೊಡ್ಡಿಯಲ್ಲಿ 30 ಅಡಿ ಅಗಲದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ!

Spread the love

ಹನೂರು: ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರ ಬಹುದಿನದ ಬೇಡಿಕೆಗೆ ಸ್ಪಂದಿಸಿ, ಶಾಸಕರ ಅನುದಾನದಡಿ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಚಾಲನೆ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಗೋಡಸ್ ನಗರದಿಂದ ಕ್ರಿಸ್ತರಾಜ್ ಅವರ ಮನೆಯವರೆಗೆ ಸುಮಾರು 2 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿ ಭರವಸೆ ನೀಡಿದ್ದ ಶಾಸಕರು, ಇದೀಗ ಸುಮಾರು ₹20 ಲಕ್ಷ ವೆಚ್ಚದಲ್ಲಿ 30 ಅಡಿ ಅಗಲದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದ್ದು, ಗ್ರಾಮೀಣ ಭಾಗದ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕಾಮಗಾರಿಯನ್ನು ಉತ್ತಮವಾಗಿ ಪೂರ್ಣಗೊಳಿಸಲು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪರಿಶೀಲನೆ ವೇಳೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮಣಿ, ಡಿ.ಆರ್. ಹಾರ್ದಿವೆರ್ ಸೀನಣ್ಣ, ಬಾಲಯ್ಯ, ಕ್ರಿಸ್ತರಾಜ್, ಹುಚ್ಚಯ್ಯ, ಮದಲೈಮುತ್ತು, ಪೌಲ್, ಅಂತೋನಿ, ಎಸ್.ಆರ್. ಮಹದೇವ್, ಮಹದೇವ, ವೆಂಕಟೇಶ್, ಮಹೇಶ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *