
ವರದಿ: ಕಾರ್ತಿಕ್ ಗೌಡ, ಹನೂರು
ಹನೂರು: ಶ್ರೀ ಮಲೆಮಹದೇಶ್ವರಸ್ವಾಮಿ ಕೃಪಾ ವಿದ್ಯಾಸಂಸ್ಥೆಯ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಬ್ಯಾಂಕ್ ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ಅಗತ್ಯ ಪರಿಕರಗಳನ್ನು ವಿತರಿಸಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಆಧಾರವಾಗಿದ್ದು, ವಿದ್ಯಾರ್ಥಿಗಳ ಕಲಿಕೆ ಹಾಗೂ ವಸತಿ ಸೌಲಭ್ಯಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ನೀಡಿರುವ ಸಹಕಾರ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕರ್ನಾಟಕ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಕೆ. ಕಿಶೋರ್ ಮಾತನಾಡಿ, ಮನುಷ್ಯನು ತಾನು ಸಂಪಾದಿಸಿದ ಸಂಪತ್ತಿನ ಒಂದು ಭಾಗವನ್ನಾದರೂ ಪರೋಪಕಾರ ಕಾರ್ಯಗಳಿಗೆ ವಿನಿಯೋಗಿಸಿದರೆ ಆತನ ಜನ್ಮ ಸಾರ್ಥಕವಾಗುತ್ತದೆ. ಅನಾದಿಕಾಲದಿಂದಲೂ ದಾನ-ಧರ್ಮದ ಪರಂಪರೆ ನಡೆದುಕೊಂಡು ಬಂದಿದ್ದು, ಸಂಘ-ಸಂಸ್ಥೆಗಳು ಹಾಗೂ ವಿವಿಧ ಸಂಸ್ಥೆಗಳೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಇದೇ ಉದ್ದೇಶದಿಂದ ಕರ್ನಾಟಕ ಬ್ಯಾಂಕ್ ತನ್ನ ಸಿಎಸ್ಆರ್ ಯೋಜನೆಯಡಿ ಶ್ರೀ ಸಾಲೂರು ಬೃಹನ್ಮಠದ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ 80 ವಿದ್ಯಾರ್ಥಿಗಳಿಗೆ ಮಂಚ, ಹಾಸಿಗೆ, ದಿಂಬು ಸೇರಿದಂತೆ ಅಗತ್ಯ ಪರಿಕರಗಳನ್ನು ವಿತರಿಸಿದೆ. ಬ್ಯಾಂಕ್ ಕೇವಲ ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ತಿಳಿಸಿದರು.

ಗುಡ್ಡಗಾಡು ಪ್ರದೇಶ ಹಾಗೂ ಬಡತನದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಕರ್ನಾಟಕ ಬ್ಯಾಂಕ್ ಸಮಾಜದ ಮೇಲಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಸಮಾಜಮುಖಿ ಕಾರ್ಯಕ್ಕಾಗಿ ಕರ್ನಾಟಕ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಕೆ. ಕಿಶೋರ್ ಹಾಗೂ ಅವರ ತಂಡವನ್ನು ಶ್ರೀ ಮಠದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾಧಿಕಾರಿ ರೂಪಾ, ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ, ಕೆಪಿಎಸ್ಸಿ ನಿಕಟಪೂರ್ವ ಅಧ್ಯಕ್ಷ ಡಾ. ಎಂ. ಮಹದೇವು, ಶ್ರೀಮತಿ ನಂದಾ ಪ್ರಸಾದ್, ಕಾರ್ಯಪಾಲಕ ಅಭಿಯಂತರ ಕಿರಣ್, ಬೇಡಗಂಪಣ ಸಮುದಾಯದ ಮುಖಂಡ ಪುಟ್ಟಣ್ಣ ಮಾಸ್ಟರ್, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

