ದೊಡ್ಡಿಂದುವಾಡಿ ಶಾಲೆಗೆ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ: ಪರಿಸರ ಕಾಳಜಿ, ಸ್ಮಾರ್ಟ್ ಕ್ಲಾಸ್ ಹಾಗೂ ಕೈತೋಟಕ್ಕೆ ಮೆಚ್ಚುಗೆ

Spread the love

ಹನೂರು: ಹನೂರು ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಸಿ.ಎಸ್.ಆರ್. ಅನುದಾನದಡಿ ಮೇಲ್ದರ್ಜೆಗೆ ಏರುತ್ತಿರುವ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಶ್ರೀಮತಿ ಶ್ರೀರೂಪಾ ಅವರು ಶನಿವಾರ ಭೇಟಿ ನೀಡಿ, ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.

ಈ ವೇಳೆ ಶಾಲೆಗೆ ಅಗತ್ಯವಿರುವ ಇನ್ನಿತರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಗಳು, ಅಡುಗೆಮನೆ ಹಾಗೂ ಬಿಸಿ ಊಟ ಯೋಜನೆಗಾಗಿ ಶಾಲಾ ಮಕ್ಕಳೇ ಬೆಳೆಸಿರುವ ಕೈತೋಟವನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಪರಿಸರ ಸಂರಕ್ಷಣೆ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡುವ ಈ ಕಾರ್ಯವನ್ನು ಶ್ಲಾಘಿಸಿದರು.

ಶಾಲೆಯಲ್ಲಿ 368 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರೌಢಶಾಲೆಯ ಶೈಕ್ಷಣಿಕ ವಾತಾವರಣವನ್ನು ಪ್ರಶಂಸಿಸಿದರು. ಅಲ್ಲದೆ, ಶಾಲೆಯ ಪ್ರಯೋಗಾಲಯ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಸಮರ್ಪಕವಾಗಿ ಬಳಸುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು.

ಬಳಿಕ ಪ್ರೌಢಶಾಲೆಯ ಶಿಕ್ಷಕರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಶ್ರೀರೂಪಾ ಅವರು, ಮಕ್ಕಳಲ್ಲಿ ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಈ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಶಾಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *