
ವರದಿ: ಕಾರ್ತಿಕ್ ಗೌಡ, ಹನೂರು
ಹನೂರು: ನಿರಂತರ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಹನೂರು ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಹನೂರು ಮಂಡಲ ಘಟಕ ಆಗ್ರಹಿಸಿದೆ. ಮಂಡಲ ಅಧ್ಯಕ್ಷ ಕಣ್ಣೂರು ವೃಷಭೇಂದ್ರ ಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ತಹಶೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಕಳೆದ ಎರಡು ವರ್ಷಗಳಿಂದ ಬರದ ಸಂಕಷ್ಟ ಅನುಭವಿಸುತ್ತಿದೆ. ಕಳೆದ ವರ್ಷವೂ ಸಮರ್ಪಕ ಮಳೆಯಾಗದ ಕಾರಣ ರೈತರು ಬಿತ್ತನೆ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಈ ಕುರಿತು ಕಳೆದ ವರ್ಷವೇ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಕ್ಕೆ ವಾಸ್ತವ ಸ್ಥಿತಿಯ ಮಾಹಿತಿಯನ್ನು ಸಮರ್ಪಕವಾಗಿ ನೀಡದ ಕಾರಣ ತಾಲೂಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ಈ ವರ್ಷವೂ ಸಂಪೂರ್ಣ ಮಳೆಯ ಕೊರತೆಯಿಂದ ಕೆರೆ, ಹಳ್ಳ, ಕೊಳ್ಳಗಳು ಬತ್ತಿದ್ದು, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಪರಿಣಾಮ ರೈತರು ಬಿತ್ತನೆ ಮಾಡಲು ಸಾಧ್ಯವಾಗದೇ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಹನೂರು ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರಾಜ್ಯ ಸರ್ಕಾರ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಕೇಂದ್ರ ಸರ್ಕಾರದ ಪಡಿತರ ಅಕ್ಕಿಯೊಂದಿಗೆ ಇತರೆ ಆಹಾರ ಸಾಮಗ್ರಿ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳನ್ನು ಉಚಿತವಾಗಿ ಪ್ರತಿ ತಿಂಗಳು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಜಾನುವಾರುಗಳ ರಕ್ಷಣೆಗೆ ಪಂಚಾಯಿತಿ ಮಟ್ಟದಲ್ಲಿ ಮೇವು ಕೇಂದ್ರಗಳನ್ನು ಆರಂಭಿಸಿ ಉಚಿತ ಮೇವು, ನೀರು ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಕುಸಿದಿರುವ ಅಂತರ್ಜಲ ಮಟ್ಟದಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವುದರಿಂದ ಹೊಸ ಕೊಳವೆಬಾವಿಗಳನ್ನು ಕೊರೆಯಿಸಿ, ಅಗತ್ಯವಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು. ಬಿತ್ತನೆ ಇನ್ನೂ ಆರಂಭವಾಗದಿರುವ ಹಿನ್ನೆಲೆಯಲ್ಲಿ ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಬೇಕು. ರೈತರ ಎಲ್ಲಾ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಜೊತೆಗೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಉಚಿತವಾಗಿ ರೈತರಿಗೆ ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಲೋಕೇಶ್ ಜಟ್ಟಿ, ಕೃಷ್ಣೇಗೌಡ, ಮಹದೇವಸ್ವಾಮಿ, ವೀರ ಸಂಗಪ್ಪ, ಮಲ್ಲೇಶ್, ಪ್ರಕಾಶ್, ಮಹದೇವು, ಶಿವರಾಜು, ಜಡೆರುದ್ರಸ್ವಾಮಿ, ಜಾಫರ್, ಶಾಂತಮೂರ್ತಿ, ಸೋಮೇಶ್, ಬಸವರಾಜು, ದಿವಾನ್ ಕುಮಾರ್, ಮಹದೇವಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

