ಹನೂರು ತಾಲ್ಲೂಕಿನ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ಭೇಟಿ: ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ, ಅಧಿಕಾರಿಗಳಿಗೆ ತ್ವರಿತ ಕ್ರಮದ ಸೂಚನೆ

Spread the love

ವರದಿ: ಕಾರ್ತಿಕ್ ಗೌಡ, ಹನೂರ

ಹನೂರು: ಜಿಲ್ಲಾಧಿಕಾರಿಗಳು ಹನೂರು ತಾಲ್ಲೂಕಿನ ಮಾರಟಹಳ್ಳಿ ಹಾಗೂ ಚಂಗಡಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ನೇರವಾಗಿ ಸಂವಾದ ನಡೆಸಿ ಸಾರ್ವಜನಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸ್ಥಳದಲ್ಲೇ ಪರಿಶೀಲನೆ ನಡೆಸಿದರು.

ಮಾರಟಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ಕಾರ್ಯಪಾಲಕ ಇಂಜಿನಿಯರ್‌, ನೀರು ಸರಬರಾಜು ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಳಿಕ ಚಂಗಡಿ ಗ್ರಾಮಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ಗ್ರಾಮಸ್ಥರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌, ಅರಣ್ಯ ಇಲಾಖೆಯ ಅಧಿಕಾರಿಗಳು, ಕಾರ್ಯಪಾಲಕ ಇಂಜಿನಿಯರ್‌, ನೀರು ಸರಬರಾಜು ವಿಭಾಗದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *