ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಐದು ಜನ ಶಾಸಕರಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

Spread the love

ವರದಿ: ಗಿರೀಶ ಘಾಟಗೆ

ಧಾರವಾಡ: ರಾಜ್ಯದಲ್ಲಿ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಬಹುತೇಕ ಖಚಿತವಾಗಿದ್ದು, ಅದರಂತೆ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರ ಸರ್ಕಾರದ ನೂತನ ಸಚಿವ ಸಂಪುಟದ ಮೊದಲ ಪಾಳಿಯಲ್ಲಿ ಸಚಿವರಾಗಲಿರುವ ಸಂಭಾವ್ಯ 14 ಶಾಸಕರ ಹೆಸರುಗಳು ಮುಂಚೂಣಿಗೆ ಬಂದಿದ್ದು, ಹೈಕಮಾಂಡ್ ಮಟ್ಟದಲ್ಲಿ ಪಟ್ಟಿ ಸಿದ್ಧವಾಗುತ್ತಿದೆ.

ಅದರಂತೆ ರಾಜ್ಯದಲ್ಲಿಯೇ ಎರಡನೇ ದೊಡ್ಡ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಹಾಗೂ ಪೇಡಾ ನಗರಿ ಎಂದೇ ಪ್ರಖ್ಯಾತಿಯಾದ ಧಾರವಾಡ ಜಿಲ್ಲೆಯಲ್ಲಿ ಒಟ್ಟು 6 ಜನ (ಅರ್ಧ ಡಜನ್) ಶಾಸಕರಿದ್ದರು. ಇದರಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕತ್ವ ರದ್ದಾಗಿರುವುದನ್ನು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಸದ್ಯ ಒಟ್ಟು 5 ಜನ ಶಾಸಕರಿದ್ದಾರೆ. ಅದರಲ್ಲಿ ವಿಧಾನಸಭೆಗೆ 3 ಜನ ಶಾಸಕರು ಹಾಗೂ ವಿಧಾನ ಪರಿಷತ್‌ಗೆ 2 ಜನ ಶಾಸಕರಿದ್ದಾರೆ. ಈ ಐದೂ ಜನ ಶಾಸಕರು ತಮ್ಮದೇ ಆದ ವರ್ಚಸ್ಸು ಹಾಗೂ ಘನತೆಯನ್ನು ಹೊಂದಿದ್ದು, ಡಿ.ಕೆ. ಶಿವಕುಮಾರ್ ಅವರ ನೂತನ ಸರ್ಕಾರದಲ್ಲಿ ಈ ಬಾರಿ ಯಾರಿಗೆ ಮಂತ್ರಿ ಭಾಗ್ಯ ಒಲಿಯಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ತೀವ್ರ ಮನೆಮಾಡಿದೆ.

ಕ್ಷೇತ್ರವಾರು ಮತ್ತು ಶಾಸಕರ ಹಿರಿತನದ ಆಧಾರದ ಮೇಲೆ ಜಿಲ್ಲೆಯ ರಾಜಕೀಯ ಚಿತ್ರಣದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ:

ಕಲಘಟಗಿ ವಿಧಾನಸಭಾ ಮತಕ್ಷೇತ್ರದಿಂದ ಸಂತೋಷ್ ಲಾಡ್ ಶಾಸಕರಾಗಿದ್ದು

ಇವರು ಈಗಾಗಲೇ ಎರಡು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಯಶಸ್ವಿಯಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಸಿದ್ದರಾಮಯ್ಯನವರ ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ ದೀರ್ಘ ಅನುಭವ ಇವರಿಗಿದೆ. ಅಂಕಿ-ಸಂಖ್ಯೆ ಸಮೇತ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಪ್ರಖರ ವಾಗ್ಮಿ ಇವರಾಗಿದ್ದಾರೆ. ಇವರು ಈಗಾಗಲೇ ಕಾರ್ಮಿಕ ವಲಯಕ್ಕೆ ಹಲವಾರು ಜನಪರ ಯೋಜನೆಗಳನ್ನು ತಲುಪಿಸಿದ್ದಾರೆ.

ಮಾತ್ರವಲ್ಲದೆ, ತಮ್ಮದೇ ಆದ ‘ಸಂತೋಷ್ ಲಾಡ್ ಫೌಂಡೇಶನ್’ ವತಿಯಿಂದ ಬಡವರು, ದೀನದಲಿತರು, ರೈತರು, ಅಂಗವಿಕಲರು ಹಾಗೂ ವಿದ್ಯಾರ್ಥಿಗಳಿಗೆ ಜಾತಿ-ಮತ ಭೇದವಿಲ್ಲದೆ ಸದಾ ಸಹಾಯ ಹಸ್ತ ನೀಡಿ, ಎಷ್ಟೋ ಜನರಿಗೆ ದಾರಿದೀಪ ಆಗಿದ್ದಾರೆ. ಪ್ರಕೃತಿಯ ವಿಕೋಪ ಸಂದರ್ಭದಲ್ಲಿ ಸರ್ಕಾರದ ಪರವಾಗಿ ದೇಶ-ವಿದೇಶಗಳಿಗೆ ತೆರಳಿ ಅತ್ಯಂತ ಜವಾಬ್ದಾರಿಯುತವಾಗಿ ಸಂರಕ್ಷಣಾತ್ಮಕ ಕೆಲಸ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ಸಿದ್ದರಾಮಯ್ಯನವರ ಪರಮ ಆಪ್ತರಾಗಿರುವ ಸಂತೋಷ್ ಲಾಡ್ ಅವರಿಗೆ ಮತ್ತೊಂದು ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವೆಂದೇ ಹೇಳಲಾಗುತ್ತಿದ್ದು, ಈ ವಾದವನ್ನು ಅಲ್ಲಗಳೆಯುವಂತಿಲ್ಲ.

ನವಲಗುಂದ ವಿಧಾನಸಭಾ ಮತಕ್ಷೇತ್ರದಿಂದ ಎನ್.ಎಚ್. ಕೋನರೆಡ್ಡಿ ಶಾಸಕರಾಗಿದ್ದು

ಇವರು ಸಹ ಈಗಾಗಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ತಳಮಟ್ಟದಿಂದ ಗಟ್ಟಿ ಹಿಡಿತ ಸಾಧಿಸಿದ್ದಾರೆ. ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಇವರು ಸಹ ಈ ಬಾರಿ ಸಚಿವ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. “ಪಕ್ಷ ಅವಕಾಶ ನೀಡಿದರೆ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡುವೆ” ಎಂದು ಅವರು ಹಲವಾರು ಬಾರಿ ಹೇಳುತ್ತಲೇ ಬಂದಿದ್ದಾರೆ.

ನವಲಗುಂದ ಮತಕ್ಷೇತ್ರದಲ್ಲಿ ರೈತರು ತಮ್ಮ ಜಮೀನುಗಳಿಗೆ ಸುಲಭವಾಗಿ ತೆರಳಲು ಅನುವಾಗುವಂತೆ ಕೃಷಿ ರಸ್ತೆಗಳನ್ನು ಸುಸಜ್ಜಿತವಾಗಿ ಮಾಡಿಕೊಡುವ ಮೂಲಕ, ಗ್ರಾಮೀಣ ಭಾಗದಲ್ಲಿ “ಚಕ್ಕಡಿ ದಾರಿ ಹರಿಕಾರ” ಎಂದೇ ಪ್ರಸಿದ್ಧಿ ಪಡೆದಿರುವ ಶಾಸಕ ಎನ್.ಎಚ್. ಕೋನರೆಡ್ಡಿ ಅವರ ಸಾಧನೆ ಹಾಗೂ ಹಕ್ಕು ಮಂಡನೆಯನ್ನು ಸಚಿವ ಸ್ಥಾನದ ರೇಸ್‌ನಲ್ಲಿ ಅಲ್ಲಗಳೆಯುವಂತಿಲ್ಲ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಶಾಸಕರಾಗಿದ್ದು

ಇವರು ಸತತವಾಗಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಹಿರಿಯ ನಾಯಕರು. ಸದ್ಯ ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಇವರು ಕೂಡ ಈ ಬಾರಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರಿಗೆ, ದೀನದಲಿತರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಅನೇಕ ಮಹತ್ವದ ಜನಪರ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಇವರ ನಿಷ್ಠೆ ಮತ್ತು ಹಿರಿತನವನ್ನು ಪರಿಗಣಿಸಿ, ಈ ಬಾರಿ ಇವರಿಗೂ ಸಹ ಸಚಿವ ಸ್ಥಾನ ನೀಡಿದರೆ ಧಾರವಾಡ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ ಭಾಗದ ಅಭಿವೃದ್ಧಿಗೆ ಬಹಳ ಅನುಕೂಲ ಆಗುತ್ತದೆ ಎಂಬ ಬಲವಾದ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್

ಇವರು ಈ ಹಿಂದೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅನುಭವ ಹೊಂದಿದ್ದು, ಪಕ್ಷದಲ್ಲಿ ನಾನಾ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸದ್ಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಪರಿಷತ್ ಮುಖ್ಯ ಸಚೇತರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯದ ಎಲ್ಲಾ ಹಿರಿಯ ಮುಖಂಡರ ಜೊತೆ ನೇರ ಸಂಪರ್ಕ ಹೊಂದಿರುವ ಸಲೀಂ ಅಹಮ್ಮದ್ ಅವರಿಗೂ ಈ ಬಾರಿ ಸಚಿವ ಸ್ಥಾನ ದೊರೆಯುವ ಮುಖ್ಯಾಂಶಗಳು ಎದ್ದು ಕಾಣುತ್ತಿವೆ.

ಇವರು ಸಹ ಅನೇಕ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗುಣಮಟ್ಟದ ರಸ್ತೆ, ಅಂಗನವಾಡಿ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚು ಶ್ರಮ ವಹಿಸಿದ್ದಾರೆ. ಇವರಿಗೆ ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನ ಸಿಕ್ಕರೆ ಅಚ್ಚರಿ ಪಡಬೇಕಾಗಿಲ್ಲ. ಇವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಸಮಾಜದ ಸರ್ವತೋಮುಖ ಏಳಿಗೆಗೆ ಬಹಳ ಅನುಕೂಲ ಆಗುತ್ತದೆ ಎಂದು ಅಲ್ಪಸಂಖ್ಯಾತ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ.

ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ

ಇವರು ಸಹ ಸದ್ಯ ವಿಧಾನ ಪರಿಷತ್ ಸದಸ್ಯರಾಗಿದ್ದು, ಜಿಲ್ಲೆಯಲ್ಲಿ ತಮ್ಮ ಶಾಸಕರ ನಿಧಿಯ ಅನುದಾನದಡಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರಿಗೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಹುಟ್ಟು ಸಂಘಟನಾ ಹೋರಾಟಗಾರರಾಗಿರುವ ಎಫ್.ಎಚ್. ಜಕ್ಕಪ್ಪನವರ ಅವರಿಗೂ ಸಹ ಸಂಪುಟದಲ್ಲಿ ಸ್ಥಾನ ನೀಡಿ ಸಚಿವ ಹುದ್ದೆ ಕೊಟ್ಟರೆ, ಸಂಘಟನಾ ಶಕ್ತಿಗೆ ಮತ್ತಷ್ಟು ಬಲ ಬರುತ್ತದೆ ಮತ್ತು ಜಿಲ್ಲೆಯ ಪ್ರಗತಿಗೆ ಬಹಳ ಅನುಕೂಲ ಆಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಒಟ್ಟಾರೆ ಸಮೀಕ್ಷೆ

ಧಾರವಾಡ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನವನ್ನು ಬಿಟ್ಟರೆ, ಸದ್ಯ ಅರ್ಧ ಡಜನ್‌ನಷ್ಟು ಪ್ರಭಾವಿ ನಾಯಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲೆಯ ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ ಹಾಗೂ ಹಿರಿತನದ ಆಧಾರದ ಮೇಲೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನೂತನ ಸರ್ಕಾರ ಯಾರಿಗೆ ಮಣೆ ಹಾಕುತ್ತದೆ? ಯಾರ ಹೆಗಲಿಗೆ ಸಚಿವ ಸ್ಥಾನದ ಜವಾಬ್ದಾರಿ ಸಿಗಲಿದೆ ಎಂಬುದನ್ನು ಸದ್ಯದಲ್ಲೇ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *