ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ: ಧಾರವಾಡ ಜಿಲ್ಲೆಯಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ

Spread the love

ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅಕ್ಟೋಬರ್ 21ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 23ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯಪಾನ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ನೇಹಲ್ ಆರ್. ಆದೇಶ ಹೊರಡಿಸಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 27ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮದ್ಯದ ಅಂಗಡಿಗಳು, ಬಾರ್‌ಗಳು ಬಂದ್

ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 135(ಸಿ) ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಮದ್ಯ ಮಾರಾಟ, ಮದ್ಯಪಾನ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಭಾರತೀಯ ತಯಾರಿಕೆಯ ಮದ್ಯದ ಅಂಗಡಿಗಳು, ಬಿಯರ್ ಬಾರ್‌ಗಳು, ಕ್ಲಬ್‌ಗಳು ಹಾಗೂ ಮದ್ಯದ ಡಿಪೋಗಳನ್ನು ನಿಗದಿತ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ.

ನಿಷೇಧದ ಅವಧಿಯಲ್ಲಿ ಯಾವುದೇ ಸ್ಥಳದಲ್ಲಿ ಮದ್ಯ ಮಾರಾಟ, ಮದ್ಯಪಾನ ಅಥವಾ ಮದ್ಯ ಸಾಗಾಣಿಕೆ ನಡೆಸುವಂತಿಲ್ಲ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಆದೇಶದ ಕಟ್ಟುನಿಟ್ಟಿನ ಜಾರಿಗೆ ಸೂಚನೆ

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(2)ರ ಅನ್ವಯ, ಪರಿಸ್ಥಿತಿಗೆ ಅನುಗುಣವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಲಯ ಅಬಕಾರಿ ನಿರೀಕ್ಷಕರು ಹಾಗೂ ಉಪವಿಭಾಗದ ಅಬಕಾರಿ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ.

ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಆದೇಶ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಕ್ರಮ ಕೈಗೊಳ್ಳಲು ಅಬಕಾರಿ ಉಪ ಆಯುಕ್ತರು, ಧಾರವಾಡ; ಅಬಕಾರಿ ಅಧೀಕ್ಷಕರು, ಧಾರವಾಡ; ಹೆಚ್ಚುವರಿ ಅಬಕಾರಿ ಅಧೀಕ್ಷಕರು, ಧಾರವಾಡ ಹಾಗೂ ಅಬಕಾರಿ ಉಪ ಅಧೀಕ್ಷಕರು (ವಿಚಕ್ಷಣ ದಳ), ಹುಬ್ಬಳ್ಳಿ ಅವರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *