
ಹನೂರು: ಕುರಿ ಮೇಯಿಸಿ ಜೀವನ ಸಾಗಿಸುತ್ತಿದ್ದ ಬಡ ರೈತನೊಬ್ಬನ ಹೊಟ್ಟೆಯ ಮೇಲೆ ಕಿಡಿಗೇಡಿಗಳು ಹೊಡೆದಿದ್ದಾರೆ. ಕುರಿಗಳು ಕುಡಿಯುವ ನೀರಿಗೆ ಅಪರಿಚಿತರು ಯೂರಿಯಾ ಮಿಶ್ರಣ ಮಾಡಿದ ಪರಿಣಾಮ, ನೀರು ಕುಡಿದ ಏಳು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹನೂರು ತಾಲ್ಲೂಕಿನ ಡಿ. ವಿಲೇಜ್‌ನ ಬೂದಿಕೆರೆ ಬಳಿ ಸಂಭವಿಸಿದೆ. 75 ಅರಬಗೆರೆ ಗ್ರಾಮದ ನಿವಾಸಿ ಮುತ್ತೇಗೌಡ ಬಿನ್ ಕರಗೆಗೌಡ ಎಂಬುವವರಿಗೆ ಸೇರಿದ ಕುರಿಗಳು ಈ ಮಾರಣಹೋಮಕ್ಕೆ ಬಲಿಯಾಗಿವೆ.
ಮುತ್ತೇಗೌಡ ಅವರು ಪ್ರತಿದಿನದಂತೆ ಸೋಮವಾರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುರಿ ಮೇಯಿಸಿಕೊಂಡು ಬರುವಾಗ, ಬಾಯಾರಿದ ಕುರಿಗಳು ಬೂದಿಕೆರೆಗೆ ನೀರು ಕುಡಿಯಲು ಹೋಗಿವೆ. ನೀರು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಕುರಿಗಳು ತೀವ್ರ ಅಸ್ವಸ್ಥಗೊಂಡು ಒದ್ದಾಡತೊಡಗಿವೆ. ಗಾಬರಿಗೊಂಡ ಮುತ್ತೇಗೌಡ ತಕ್ಷಣವೇ ಗ್ರಾಮಸ್ಥರಿಗೆ ವಿಷಯ ತಿಳಿಸಿ ವೈದ್ಯಕೀಯ ಚಿಕಿತ್ಸೆಗೆ ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಏಳು ಕುರಿಗಳು ಮೃತಪಟ್ಟಿದ್ದವು. ಬಡತನದಲ್ಲೂ ಕುರಿಗಳನ್ನೇ ನಂಬಿ ಬದುಕುತ್ತಿದ್ದ ತನಗೆ ಈ ಘಟನೆಯಿಂದ ದೊಡ್ಡ ಪೆಟ್ಟು ಬಿದ್ದಿದೆ ಎಂದು ಸಂತ್ರಸ್ತ ರೈತ ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪಶುವೈದ್ಯಾಧಿಕಾರಿ ಸಿದ್ದರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರಿನಲ್ಲಿ ಯೂರಿಯಾ ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಣ್ಣ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದು, ಅಮಾಯಕ ಪ್ರಾಣಿಗಳನ್ನು ಬಲಿಪಡೆದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ವರದಿ: ಕಾರ್ತಿಕ್ ಗೌಡ, ಹನೂರು.

