ಈಜಲು ಹೋಗಿ ಜಲಸಮಾಧಿಯಾದ ಮೂವರು ಹದಿಹರೆಯದ ಬಾಲಕರು: ಸಿಂಗನಳ್ಳಿಯಲ್ಲಿ ಆವರಿಸಿದ ಶೋಕಛಾಯೆ

Spread the love

ಧಾರವಾಡ: ಬೇಸಿಗೆಯ ತೀವ್ರ ಬಿಸಿಲಿನ ತಾಪಕ್ಕೆ ತಣ್ಣಗಾಗಲು ಕೆರೆಗೆ ಈಜಲು ಹೋದ ಮೂವರು ಹದಿಹರೆಯದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಸಿಂಗನಳ್ಳಿ ಗ್ರಾಮದ ಸಮೀಪದ ಕರೆಮ್ಮನಕೆರೆಯಲ್ಲಿ ಶನಿವಾರ ಸಂಭವಿಸಿದೆ.

​ಸಿಂಗನಳ್ಳಿ ಗ್ರಾಮದ ನಿವಾಸಿಗಳಾದ ಅನ್ವರ ಇಬ್ರಾಹಿಂ ವಟ್ನಾಳ (13), ಸುಭಾನಿ ಇಸಾಕ್ ಬಾಗಜಿಕೊಪ್ಪ (12) ಹಾಗೂ ಮೆಹಬೂಬಸುಭಾನಿ ದಾದಾಫೀರ ವಡ್ನಾಳ (15) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

​ಪ್ರಸ್ತುತ ದಿನಗಳಲ್ಲಿ ಬೇಸಿಗೆಯ ತಾಪಮಾನ ಅತಿಯಾಗಿ ಹೆಚ್ಚಾಗಿದ್ದರಿಂದ ಮೂವರೂ ಬಾಲಕರು ಮಧ್ಯಾಹ್ನದ ವೇಳೆ ಈಜಾಡಲು ಕರೆಮ್ಮನಕೆರೆಗೆ ತೆರಳಿದ್ದರು. ಆದರೆ ನೀರಿನ ಆಳದ ಅರಿವಿಲ್ಲದೇ ಬಾಲಕರು ನೀರಿನಲ್ಲಿ ಮುಳುಗಲಾರಂಭಿಸಿದ್ದು, ಈ ವೇಳೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಮೂವರೂ ಜಲಸಮಾಧಿಯಾಗಿದ್ದಾರೆ ಎನ್ನಲಾಗಿದೆ. ಇತ್ತ ಮಧ್ಯಾಹ್ನ ಹೋದ ಬಾಲಕರು ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ಮತ್ತು ಗ್ರಾಮಸ್ಥರು ಕೆರೆಯ ಬಳಿ ಹುಡುಕಾಟ ನಡೆಸಿದಾಗ ಈ ಭೀಕರ ದುರಂತ ಬೆಳಕಿಗೆ ಬಂದಿದೆ.

​ವಿಷಯ ತಿಳಿಯುತ್ತಿದ್ದಂತೆಯೇ ಕೆರೆಯ ಬಳಿ ನೂರಾರು ಗ್ರಾಮಸ್ಥರು ಜಮಾಯಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎಂದಿನಂತೆ ಆಟವಾಡಿ ಬರುತ್ತೇವೆಂದು ಹೋದ ಮಕ್ಕಳು ಶವವಾಗಿ ಮನೆಗೆ ಮರಳುತ್ತಿರುವುದನ್ನು ಕಂಡು ಹೆತ್ತ ಕರುಳುಗಳು ರೋದಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.

​ಘಟನಾ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರ ನೆರವಿನೊಂದಿಗೆ ಬಾಲಕರ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮೂವರು ಬಾಲಕರ ಅಕಾಲಿಕ ಮರಣದಿಂದ ಸಿಂಗನಳ್ಳಿ ಗ್ರಾಮದಲ್ಲಿ ಸದ್ಯ ಶೋಕಛಾಯೆ ಆವರಿಸಿದೆ.

Leave a Reply

Your email address will not be published. Required fields are marked *