
ಧಾರವಾಡ, ಜೂ. 29: ಭಾರತ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)-2026 ಜಾಗೃತಿ ಜಾಥಾವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ನೇಹಲ್ ಆರ್. ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ ಪಾಟೀಲ ಅವರು ಆಕಾಶಕ್ಕೆ ಬಲೂನ್ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಗಿಡಕ್ಕೆ ನೀರುಣಿಸುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್., ದೋಷರಹಿತ ಹಾಗೂ ನಿಖರವಾದ ಮತದಾರರ ಪಟ್ಟಿಯ ಅಗತ್ಯವನ್ನು ವಿವರಿಸಿ, ಪ್ರತಿಯೊಬ್ಬ ಅರ್ಹ ನಾಗರಿಕರು ಎನ್ಯುಮರೇಷನ್ ಫಾರ್ಮ್ ಅನ್ನು ತಪ್ಪದೇ ಭರ್ತಿ ಮಾಡಿ ಸಲ್ಲಿಸುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪ್ರಮುಖ ಪಾತ್ರವಹಿಸುತ್ತದೆ. ರಾಜಕೀಯ ಪಕ್ಷಗಳು, ಯುವ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು, ಬೂತ್ ಮಟ್ಟದ ಏಜೆಂಟರು ಹಾಗೂ ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕು ಎಂದು ಕರೆ ನೀಡಿದರು.
ಜಾಗೃತಿ ಜಾಥಾವು ಪಾಲಿಕೆ ಆವರಣದಿಂದ ಆರಂಭಗೊಂಡು ಮಹಾರಾಣಾ ಪ್ರತಾಪ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ ಹಾಗೂ ಕೆಸಿಸಿ ಬ್ಯಾಂಕ್ ಮಾರ್ಗವಾಗಿ ಸಂಚರಿಸಿ, ಕಲಾಭವನ ಆವರಣದಲ್ಲಿ ಸಮಾಪ್ತಿಯಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮತದಾರರ ನೋಂದಣಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸಹಾಯಕ ಚುನಾವಣಾಧಿಕಾರಿ ಉಮೇಶ ಸವಣೂರ, ಪಾಲಿಕೆಯ ವಲಯ ಆಯುಕ್ತರಾದ ಅರವಿಂದ ಜಮಖಂಡಿ, ಶಂಕರ ಪಾಟೀಲ, ರಮೇಶ್ ನ್ಯೂಲ್ವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜಾಥಾದಲ್ಲಿ ನೂರಾರು ಸಿಬ್ಬಂದಿ, ಚುನಾವಣಾ ಕಾರ್ಯಕರ್ತರು, ಯುವ ಮತದಾರರು ಹಾಗೂ ಸಾರ್ವಜನಿಕರು ಪಾಲ್ಗೊಂಡು ‘ದೋಷಮುಕ್ತ ಮತದಾರರ ಪಟ್ಟಿ – ಬಲಿಷ್ಠ ಪ್ರಜಾಪ್ರಭುತ್ವ’ ಎಂಬ ಸಂದೇಶವನ್ನು ಜನರಿಗೆ ತಲುಪಿಸಿದರು.

