ಎಸ್‌ಸಿ-ಎಸ್‌ಟಿ, ಫೋಕ್ಸೊ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಿ: ಎಫ್.ಎಚ್. ಜಕ್ಕಪ್ಪನವರ

Spread the love

ಧಾರವಾಡ, ಜೂ.30: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣಗಳು, ಫೋಕ್ಸೊ ಪ್ರಕರಣಗಳು ಸೇರಿದಂತೆ ನ್ಯಾಯಾಲಯ ಹಾಗೂ ತನಿಖಾ ಹಂತದಲ್ಲಿರುವ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ ಮಂಗಳವಾರ ನಡೆದ 2026ನೇ ಸಾಲಿನ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಎರಡನೇ ತ್ರೈಮಾಸಿಕ ಸಭೆ ಹಾಗೂ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಿ, ಅರ್ಹ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ತಕ್ಷಣ ಮಂಜೂರು ಮಾಡಿ ವಿತರಿಸಬೇಕು ಎಂದು ಸೂಚಿಸಿದರು. ಜೊತೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ, ಇಎಸ್‌ಐ, ಪಿಎಫ್, ಆರೋಗ್ಯ ತಪಾಸಣೆ, ಸುರಕ್ಷತಾ ಪರಿಕರ, ಗುಣಮಟ್ಟದ ಉಪಹಾರ, ಗೃಹಭಾಗ್ಯ ಯೋಜನೆಯಡಿ ಮನೆ, ವಿಶ್ರಾಂತಿ ಗೃಹ, ಅನುಕಂಪದ ಆಧಾರದ ಉದ್ಯೋಗ, ಆರ್ಥಿಕ ಸೌಲಭ್ಯ ಹಾಗೂ ಜೀವವಿಮೆ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಫೋಕ್ಸೊ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಸಿಪಿ ರವೀಶ್ ಸಿ.ಆರ್., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಕೀಲರು ಹಾಗೂ ಸಮಾಜ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *