ಎಸ್‌ಸಿ/ಎಸ್‌ಟಿ ಕಾಯ್ದೆ ನಮ್ಮ ಸಾಧನೆ; ನಿಮ್ಮ ಪರ ಇರುವವರ ಪರ ನಿಲ್ಲಿ – ವಾಲ್ಮೀಕಿ ಸಮುದಾಯಕ್ಕೆ ಸಿಎಂ ಕರೆ

Spread the love

ಬೆಂಗಳೂರು: ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅವರ ಜನಸಂಖ್ಯೆ ಪ್ರಮಾಣದಷ್ಟೇ ಅಭಿವೃದ್ಧಿ ಬಜೆಟ್‌ನಲ್ಲೂ ಹಣ ಮೀಸಲಿಡಲು ಕಾಯ್ದೆ ಜಾರಿ ಮಾಡಿದ್ದು ನಮ್ಮದೇ ನೇತೃತ್ವದ ಸರ್ಕಾರ. ಈ ಸಮುದಾಯಗಳಿಗೆ ಹೋಬಳಿಗೊಂದರಂತೆ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಸ್ಥಾಪಿಸಿದ್ದೂ ಕೂಡ ಇದೇ ಸಿದ್ದರಾಮಯ್ಯ. ಈ ಇತಿಹಾಸವನ್ನು ವಾಲ್ಮೀಕಿ ಸಮುದಾಯ ಚೆನ್ನಾಗಿ ತಿಳಿದುಕೊಳ್ಳಬೇಕು. ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇರುತ್ತಾರೋ ಅವರ ಪರವಾಗಿ ವಾಲ್ಮೀಕಿ ಸಮುದಾಯ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

​ವಿಧಾನಸೌಧದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಲ್ಮೀಕಿ ಸಮುದಾಯ ಎಸ್‌ಟಿ ಸೇರ್ಪಡೆ: ಉಗ್ರಪ್ಪ ಪಾತ್ರ ಸ್ಮರಣೆ

​ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿಸಲು ಉಗ್ರಪ್ಪ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸಿಎಂ ಸ್ಮರಿಸಿದರು. “ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆ ಅವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ಶಿಫಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಸುಮ್ಮನೆ ಕೂರಲಿಲ್ಲ. ಆಗ ಪ್ರಧಾನಿಯಾಗಿದ್ದ ಚಂದ್ರಶೇಖರ್ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ಎಸ್.ಟಿ ಗೆ ಸೇರಿಸಿದರು. ಹೀಗಾಗಿ, ವಾಲ್ಮೀಕಿ, ಬೇಡ ಮತ್ತು ನಾಯಕ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು” ಎಂದು ಹೇಳಿದರು.

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನನ್ನ ಸಂಪೂರ್ಣ ಸಹಮತವಿದೆ

​ಕುರುಬರನ್ನು ಎಸ್‌.ಟಿ ಗೆ ಸೇರಿಸುವ ಹೋರಾಟವನ್ನು ಬಿಜೆಪಿಯ ಈಶ್ವರಪ್ಪ ಪ್ರಾರಂಭಿಸಿದರು. ಸಿಎಂ ಆಗಿದ್ದ ಬೊಮ್ಮಾಯಿ ಅವರು ಈ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ.

​”ಕುರುಬರನ್ನು ಎಸ್‌.ಟಿ ಗೆ ಸೇರಿಸಿದರೆ ಎಸ್.ಟಿ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ ಮತ್ತು ಸಹಮತವೂ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು, ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ” ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಜೆ. ಹೆಚ್. ಪಟೇಲರು ಸಿಎಂ ಆಗಿದ್ದಾಗ ಬೆಸ್ತರು ಸೇರಿ ಹಲವು ಸಮುದಾಯಗಳನ್ನು ಎಸ್.ಟಿ ಗೆ ಸೇರಿಸಲು ಶಿಫಾರಸ್ಸು ಮಾಡಿದರೂ, ಇವತ್ತಿನವರೆಗೂ ಸಾಧ್ಯವಾಗಿಲ್ಲ ಎಂದು ಉದಾಹರಿಸಿದರು.

ಟಿಎಸ್‌ಪಿ ಯೋಜನೆಯಡಿ ₹33,372 ಕೋಟಿ ಬಿಡುಗಡೆ: ನುಡಿದಂತೆ ನಡೆದಿದ್ದೇವೆ

​ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಕಡೆಗೆ ದಿಟ್ಟ ಹೆಜ್ಜೆಯಿಟ್ಟಿರುವ ನಮ್ಮ ಸರ್ಕಾರವು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಟಿಎಸ್‌ಪಿ (TSP) ಯೋಜನೆಯಡಿ ₹33,372.33 ಕೋಟಿ ಮೀಸಲಿಟ್ಟಿದ್ದು, ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಸಿಎಂ ಹೇಳಿದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ; ಶಿಕ್ಷಣಕ್ಕೆ ಆದ್ಯತೆ ನೀಡಿ

​ಮಹರ್ಷಿ ವಾಲ್ಮೀಕಿ ಅವರು ದೇಶ ಕಂಡ ಅಪರೂಪದ ಸಾಹಿತಿ. ರಾಮಾಯಣದಂತಹ ಶ್ರೇಷ್ಠ ಗ್ರಂಥದ ಕರ್ತೃ. ಅವರು ಶೂದ್ರ ಜನಾಂಗದಲ್ಲಿ ಜನಿಸಿದ್ದರೂ ರಾಮಾಯಣದಂತಹ ಶ್ರೇಷ್ಠ ಗ್ರಂಥವನ್ನು ವಿಶ್ವಕ್ಕೆ ಪರಿಚಯಿಸಿದರು. ಹೀಗಾಗಿ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

​ವಾಲ್ಮೀಕಿ ಅವರ ಬಗ್ಗೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ಉಗ್ರಪ್ಪ ಅವರ ಬೇಡಿಕೆ ಬಗ್ಗೆಯೂ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

​ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಗಳನ್ನು ಐವರು ಗಣ್ಯರಿಗೆ ವಿತರಿಸಿ ಗೌರವಿಸಿದರು.

Leave a Reply

Your email address will not be published. Required fields are marked *