
ಧಾರವಾಡ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಹಾಗೂ ನರಗುಂದ ಶಾಖಾ ಕಾಲುವೆಗಳಿಗೆ ಮೇ 1 ರಿಂದ ಮೇ 10ರವರೆಗೆ ನೀರು ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಈ ನೀರನ್ನು ಕೇವಲ ಕೆರೆಗಳನ್ನು ತುಂಬಿಸಿಕೊಳ್ಳಲು ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ ಗ್ರಾಮಗಳ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಹತ್ತು ದಿನಗಳ ಕಾಲ ಹರಿಯಲಿರುವ ಈ ನೀರನ್ನು ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಅಥವಾ ಇನ್ನಿತರ ಉದ್ದೇಶಗಳಿಗೆ ಬಳಸಬಾರದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರು ಪಂಪ್‌ಸೆಟ್ ಅಥವಾ ಇನ್ಯಾವುದೇ ಉಪಕರಣಗಳ ಮೂಲಕ ನೀರು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಜಿಲ್ಲಾಧಿಕಾರಿಗಳ ಈ ಆದೇಶವನ್ನು ಉಲ್ಲಂಘಿಸಿ ನೀರು ಕಳ್ಳತನ ಮಾಡುವುದು ಕಂಡುಬಂದಲ್ಲಿ, ಅಂತಹವರ ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡುವುದಲ್ಲದೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಹಾಗೂ ರೈತರು ಕುಡಿಯುವ ನೀರಿನ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

