ಪಶ್ಚಿಮ ಪದವೀಧರರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರಗೆ ಹ್ಯಾಟ್ರಿಕ್ ಗೆಲುವು,ಕಾಂಗ್ರೆಸ್ ಅಭ್ಯರ್ತಿ ಮೋಹನ ಲಿಂಬಿಕಾಯವರಿಗೆ 9323 ಮತಗಳ ಅಂತರದಿಂದ ಸೋಲು,

Spread the love

ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಸತತ ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದ್ದಾರೆ. ಮಂಗಳವಾರ ರಾತ್ರಿ 2 ಗಂಟೆ ಸುಮಾರಿಗೆ ಪೂರ್ಣಗೊಂಡ ಮತ ಎಣಿಕೆಯಲ್ಲಿ ಸಂಕನೂರ ಅವರು ಒಟ್ಟು 33,711 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮತ ಎಣಿಕೆಯ ಅಂತಿಮ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು 33,711 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು 24,388 ಮತಗಳನ್ನು ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಕಾಂತಕುಮಾರ್ ಅವರು 4,055 ಮತಗಳನ್ನು ಪಡೆದಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 73,691 ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ 10,245 ಮತಗಳು ಅಸಿಂಧುವಾಗಿವೆ. ಉಳಿದ 63,446 ಮತಗಳು ಸಿಂಧುವಾಗಿವೆ. ಐದು ಅಭ್ಯರ್ಥಿಗಳು ಮೂರಂಕಿಯ ಮತಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಆರು ಅಭ್ಯರ್ಥಿಗಳು ಎರಡಂಕಿಯ ಮತಗಳನ್ನೂ ದಾಟಿಲ್ಲ.

ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ವಿ. ಸಂಕನೂರ ಅವರು, ಇದು ಬಿಜೆಪಿ ಮತದಾರರ ಗೆಲುವಾಗಿದೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ನಡೆಸಿದ ನಿರಂತರ ಶ್ರಮವೇ ಗೆಲುವಿಗೆ ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾಂಗ್ರೆಸ್‌ನವರು ಇವಿಎಂ ಸರಿಯಿಲ್ಲ ಎಂದು ಆರೋಪಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದರು. ಇದೀಗ ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲೂ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ‘ಕುಣಿಯಲಾರದವರು ನೆಲ ಡೊಂಕು ಎಂದಂತೆ ಕಾಂಗ್ರೆಸ್‌ನವರು ನಡೆದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

Leave a Reply

Your email address will not be published. Required fields are marked *