
ನವಲಗುಂದ: ಸಾರ್ವಜನಿಕರ ಮನೆಗಳಿಗೆ ಸಣ್ಣ ದಾಖಲೆ ತಪ್ಪಾದರೂ ಅದು ಅಕ್ರಮ ಎಂದು ದಂಡ ವಿಧಿಸಿ ಜಪ್ತಿ ಮಾಡುವ ನವಲಗುಂದ ಪುರಸಭೆಯು, ತಾನು ಕಾರ್ಯಾಲಯ ನಡೆಸುತ್ತಿರುವ ಜಾಗಕ್ಕೆ ಯಾವುದೇ ಅಧಿಕೃತ ದಾಖಲೆ ಹೊಂದಿಲ್ಲ ಎಂಬ ಆಘಾತಕಾರಿ ಅಂಶ ಇದೀಗ ಬಯಲಾಗಿದೆ. ಈ ಸಂಬಂಧ ಪುರಸಭೆಯ ಆಡಳಿತಾತ್ಮಕ ವೈಫಲ್ಯ ಮತ್ತು ಅಧಿಕಾರ ದುರ್ಬಳಕೆಯನ್ನು ಖಂಡಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಾಬುಸಾಬ ಯರಗುಪ್ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಆಸ್ತಿಗಳ ಇ-ಸ್ವತ್ತು ಉತಾರ ನೀಡುವ ಕೇಂದ್ರವೇ ಆಗಿರುವ ಪುರಸಭೆ ಕಾರ್ಯಾಲಯವು ಸಿ.ಟಿ.ಎಸ್ ನಂ. 1458 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಆಶ್ಚರ್ಯಕರ ಸಂಗತಿಯೆಂದರೆ ಈ ಜಾಗಕ್ಕೆ ಪುರಸಭೆಯ ಹೆಸರಿನಲ್ಲಿ ಯಾವುದೇ ಉತಾರ ಅಥವಾ ಆಸ್ತಿ ಕಾರ್ಡ್ ಲಭ್ಯವಿಲ್ಲ. ಜನರ ಆಸ್ತಿಗಳ ಕಾನೂನುಬದ್ಧತೆಯನ್ನು ನಿರ್ಧರಿಸುವ ಈ ಸಂಸ್ಥೆಯು, ತಾನೇ ದಾಖಲೆಗಳಿಲ್ಲದೆ ‘ಅಕ್ರಮ’ವಾಗಿ ಕಾರ್ಯಾಲಯ ನಡೆಸುತ್ತಿರುವುದು ಆಡಳಿತದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಆರೋಗ್ಯ ಇಲಾಖೆಯ ಜಾಗ ಕಬಳಿಕೆ ಆರೋಪ:
ಮೂಲ ದಾಖಲೆಗಳ ಪ್ರಕಾರ ಪುರಸಭೆ ಕಚೇರಿ ಇರುವ ಜಾಗವು ವಾಸ್ತವವಾಗಿ ಆರೋಗ್ಯ ಇಲಾಖೆಗೆ ಸೇರಿದ ಸರ್ಕಾರಿ ಆಸ್ಪತ್ರೆಯ ಜಾಗವಾಗಿದೆ. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡಬೇಕಾದ ಜಾಗವನ್ನು ಪುರಸಭೆಯು ಅನಧಿಕೃತವಾಗಿ ಬಳಸಿಕೊಳ್ಳುತ್ತಿದೆ. ಈ ಗಂಭೀರ ಕರ್ತವ್ಯ ಲೋಪದ ವಿರುದ್ಧ ಮಾಬುಸಾಬ ಯರಗುಪ್ಪಿ ನೀಡಿದ ದೂರನ್ನು (ಸಂಖ್ಯೆ: ಕಂಪ್ಲೇಟ್/ಉಪಲೋಕ್/ಬಿಜಿಎಮ್/1990/2026) ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತವು, ಮುಖ್ಯಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
”ಸಾಮಾನ್ಯ ಜನರಿಗೆ ಒಂದು ದಾಖಲೆ ಕಡಿಮೆ ಇದ್ದರೂ ಹತ್ತಾರು ಬಾರಿ ಅಲೆದಾಡಿಸುವ ಅಧಿಕಾರಿಗಳಿಗೆ, ತಮ್ಮದೇ ಕಚೇರಿಗೆ ದಾಖಲೆ ಇಲ್ಲ ಎಂಬುದು ತಿಳಿದಿಲ್ಲವೇ? ಇದು ಸಾರ್ವಜನಿಕರ ನಂಬಿಕೆಗೆ ಎಸಗಿದ ದ್ರೋಹವಾಗಿದೆ” ಎಂದು ಮಾಬುಸಾಬ ಯರಗುಪ್ಪಿ ಗುಡುಗಿದ್ದಾರೆ. ಕೂಡಲೇ ಆರೋಗ್ಯ ಇಲಾಖೆಯ ಈ ಜಾಗವನ್ನು ಕಾನೂನುಬದ್ಧವಾಗಿ ಪುರಸಭೆಯ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬೇಕು ಮತ್ತು ಇಷ್ಟು ವರ್ಷಗಳ ಕಾಲ ದಾಖಲೆ ನಿರ್ವಹಣೆಯಲ್ಲಿ ಘೋರ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಆಡಳಿತವು ಇಷ್ಟು ದೊಡ್ಡ ಮಟ್ಟದ ನಿಯಮ ಉಲ್ಲಂಘನೆ ಮಾಡುತ್ತಿರುವುದು ಈಗ ಪಟ್ಟಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

