ದೇವನೂರು ಮಾರ್ಗ ಮಧ್ಯೆ ವಿಷಪೂರಿತ ಆಹಾರ ಸೇವಿಸಿ 20 ಕುರಿ ಸಾವು: ಪರಿಹಾರಕ್ಕಾಗಿ ಕುರಿಗಾಹಿಗಳ ಮನವಿ

Spread the love

ಕುಂದಗೋಳ: ತಾಲ್ಲೂಕಿನ ದೇವನೂರು ಹಾಗೂ ಕುಂದಗೋಳ ಮಾರ್ಗ ಮಧ್ಯದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ 20 ಕುರಿಗಳು ವಿಷಕಾರಿ ಪದಾರ್ಥ ಸೇವಿಸಿ ಶನಿವಾರ ದುರಂತವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮುದುಗಲ್ ಗ್ರಾಮದ ಮೂಲದ ಕುರಿಗಾಹಿ ಹನುಮವ್ವ ಗೊಲ್ಲರ ಅವರಿಗೆ ಸೇರಿದ ಕುರಿಗಳು ಇದಾಗಿದ್ದು, ಜೀವನೋಪಾಯಕ್ಕೆ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡು ಮಾಲಕಿ ಕಣ್ಣೀರಿಡುತ್ತಿದ್ದಾರೆ.

ತಮ್ಮ ಬಳಿ ಇದ್ದ ಒಟ್ಟು 150 ಕುರಿಗಳ ಪೈಕಿ 20 ಕುರಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿರುವುದರಿಂದ ಅಂದಾಜು 3 ಲಕ್ಷ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಈ ಅನಿರೀಕ್ಷಿತ ದುರಂತದಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜೀವನೋಪಾಯ ಕಳೆದುಕೊಂಡಿರುವ ತಮಗೆ ಸರ್ಕಾರದಿಂದ ತಕ್ಷಣದ ಆರ್ಥಿಕ ನೆರವು ದೊರೆಯಬೇಕೆಂದು ಸಂತ್ರಸ್ತ ಕುರಿಗಾಹಿ ಹನುಮವ್ವ ಅವರು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಕಣ್ಣೀರಿನ ಮನವಿ ಮಾಡಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿ ಹನುಮಂತಗೌಡ ಪಾಟೀಲ್ ಅವರು ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿದ ವೈದ್ಯಾಧಿಕಾರಿಗಳು, ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಶೀಘ್ರವೇ ಸಲ್ಲಿಸಲಾಗುವುದು. ಸರ್ಕಾರದ ನಿಯಮಾವಳಿ ಹಾಗೂ ಪರಿಹಾರ ಯೋಜನೆಯಡಿ ಪ್ರತಿ ಮೃತ ಕುರಿಗೆ ತಲಾ 7,500 ರೂಪಾಯಿಗಳಂತೆ ಆರ್ಥಿಕ ಸಹಾಯಧನ ಸಿಗಲಿದ್ದು, ಸಂತ್ರಸ್ತ ಕುಟುಂಬಕ್ಕೆ ಶೀಘ್ರವಾಗಿ ಪರಿಹಾರ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *