ರಾಷ್ಟ್ರೀಯ ತೋಟಗಾರಿಕೆ ಮಿಷನ್: ವಿವಿಧ ಸಹಾಯಧನ ಸೌಲಭ್ಯಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

Spread the love

ರಾಷ್ಟ್ರೀಯ ತೋಟಗಾರಿಕೆ ಮಿಷನ್: ವಿವಿಧ ಸಹಾಯಧನ ಸೌಲಭ್ಯಕ್ಕಾಗಿ ರೈತರಿಂದ ಅರ್ಜಿ ಆಹ್ವಾನ
ಧಾರವಾಡ: ಪ್ರಸಕ್ತ 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳ ಸಹಾಯಧನ ಸೌಲಭ್ಯಕ್ಕಾಗಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಘಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ತೋಟಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಯೋಜನೆಯಡಿ, ಹೊಸ ಪ್ರದೇಶ ವಿಸ್ತರಣೆ ಅಡಿಯಲ್ಲಿ ಮಾವು, ಬಾಳೆ, ಪಪ್ಪಾಯ, ಕರಿಮೆಣಸು ಹಾಗೂ ಗೋಡಂಬಿ ಬೆಳೆಗಳಿಗೆ ಸಹಾಯಧನ ಸಿಗಲಿದೆ. ಇದರೊಂದಿಗೆ ಸುಗಂಧರಾಜ, ಸೇವಂತಿಗೆ ಮತ್ತು ಚೆಂಡುಹೂವಿನಂತಹ ಪುಷ್ಪೋದ್ಯಮ ಬೆಳೆಗಳ ವಿಸ್ತರಣೆ, ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಮಾವು ಪುನಶ್ಚೇತನ ಘಟಕಗಳಿಗೂ ಆರ್ಥಿಕ ನೆರವು ನೀಡಲಾಗುತ್ತದೆ. ತಾಂತ್ರಿಕ ಮತ್ತು ಮೂಲಸೌಕರ್ಯ ವಿಭಾಗದಲ್ಲಿ 20 ಪಿಟಿಓ ಹೆಚ್‌ಪಿ ಟ್ರ್ಯಾಕ್ಟರ್, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪ್ಲಾಸ್ಟಿಕ್ ಮಲ್ಚಿಂಗ್ ಹಾಗೂ ತಳ್ಳುಗಾಡಿ ಸೇರಿದಂತೆ ಇತ್ಯಾದಿ ಆಧುನಿಕ ಕೃಷಿ ಪರಿಕರಗಳ ಘಟಕಗಳಿಗೂ ಈ ಸೌಲಭ್ಯ ಅನ್ವಯಿಸಲಿದೆ.
ಆಸಕ್ತಿಯುಳ್ಳ ಹಾಗೂ ಅರ್ಹ ರೈತರು ಜೂನ್ 10, 2026 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಕಲಘಟಗಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿ.ಪಂ) ಕಚೇರಿಗೆ ಭೇಟಿ ನೀಡಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಈ ಯೋಜನೆಯಡಿ ಮೊದಲು ಬಂದ ಅರ್ಜಿದಾರರಿಗೆ ಆದ್ಯತೆ ಮೇರೆಗೆ ಜ್ಯೇಷ್ಠತೆಯ ಆಧಾರದ ಮೇಲೆ ಸಹಾಯಧನವನ್ನು ಮಂಜೂರು ಮಾಡಲಾಗುತ್ತಿದ್ದು, ತಾಲ್ಲೂಕಿನ ಪ್ರಗತಿಪರ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *