ಕಾನೂನುಬದ್ಧ ದತ್ತು ಪ್ರಕ್ರಿಯೆಗೆ ‘ಮಿಷನ್ ವಾತ್ಸಲ್ಯ’ ಪೋರ್ಟಲ್ ಕಡ್ಡಾಯ: ಜಿಲ್ಲಾಧಿಕಾರಿ ದಿವ್ಯ ಪ್ರಭು

Spread the love

ನವೆಂಬರ್‌ನಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ; ಅನಧಿಕೃತ ದತ್ತು ಪಡೆಯುವುದು ಗಂಭೀರ ಅಪರಾಧ

ಧಾರವಾಡ : ನವೆಂಬರ್ 25: ಅನಾಥ ಮಕ್ಕಳು ಮತ್ತು ಶಿಶುಗಳನ್ನು ಕಾನೂನುಬದ್ಧವಾಗಿ ದತ್ತು ಪಡೆಯಲು ಕೇಂದ್ರ ಸರ್ಕಾರದ ‘ಮಿಷನ್ ವಾತ್ಸಲ್ಯ’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ಪಷ್ಟಪಡಿಸಿದ್ದಾರೆ. ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆಯುವುದು ಅಪರಾಧವಾಗಿದ್ದು, ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

​ಅವರು ಮಂಗಳವಾರದಂದು (ನ.25) ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ದತ್ತು ಮಾಸಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾನೂನು ಪಾಲನೆಯ ಅಗತ್ಯ:

​ಮಕ್ಕಳನ್ನು ದತ್ತು ಪಡೆಯುವಲ್ಲಿ ಅನೇಕರು ಮಧ್ಯವರ್ತಿಗಳ ಮೂಲಕ ಮೋಸ ಹೋಗಿ ಅಪರಾಧ ಪ್ರಕರಣದಲ್ಲಿ ಸಿಲುಕುತ್ತಾರೆ. ಇಂತಹ ಜನರಿಗೆ ಅನಾಥಾಲಯ ಹಾಗೂ ಮಕ್ಕಳ ರಕ್ಷಣಾ ಘಟಕದಿಂದ ಕಾನೂನುಬದ್ಧವಾಗಿ ದತ್ತು ಪಡೆಯಲು ಅಗತ್ಯ ಮಾಹಿತಿ ಮತ್ತು ಅರಿವು ನೀಡುವ ಸಲುವಾಗಿ ಸಮಾಲೋಚಕರ ನೆರವು ನೀಡಲಾಗುತ್ತದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

​ಸರಕಾರೇತರ ಸಂಘ ಸಂಸ್ಥೆಗಳು ಹಾಗೂ ಆಸಕ್ತರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದರೆ, ಈ ದತ್ತು ಮಾಸಾಚರಣೆಯ ಬಗ್ಗೆ ಇನ್ನೂ ಹೆಚ್ಚು ಜನರಿಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಮಿಷನ್ ವಾತ್ಸಲ್ಯ ಪೋರ್ಟಲ್ ಮೂಲಕ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದ ನಂತರವೇ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ ಮಾಹಿತಿಯು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ತಲುಪಬೇಕು ಮತ್ತು ಜನರು ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆಯಲು ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಿ ಹೇಳಿದರು.

ಮಾಸಾಚರಣೆಯ ಪ್ರಚಾರ ಕಾರ್ಯಕ್ರಮಗಳು:

​ನವೆಂಬರ್ ತಿಂಗಳಿನಲ್ಲಿ ವಿಶೇಷಚೇತನ ಮಕ್ಕಳ ದತ್ತು ಪ್ರಕ್ರಿಯೆ ಕುರಿತು ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕಾಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಜ್ಞಾವಿಧಿ ಬೋಧಿಸುವುದು ಮತ್ತು ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿರುವ ನರ್ಸಿಂಗ್ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ. ಅಲ್ಲದೆ, ಗ್ರಾಮ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ದತ್ತು ಪಡೆಯುವ ಮಾಹಿತಿಯನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಅಭಿಪ್ರಾಯ:

​ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಅವರು ಮಾತನಾಡಿ, ಕೆಲವರು ಅನುಕಂಪ ಮತ್ತು ಪ್ರೀತಿಯ ಆಧಾರದಲ್ಲಿ ನಿಯಮಗಳನ್ನು ಪಾಲಿಸದೆ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಆದರೆ ಅಂತಹ ದತ್ತು ತೆಗೆದುಕೊಳ್ಳುವುದು ಕಾನೂನುಬಾಹಿರವಾಗಿರುತ್ತದೆ. ಮಕ್ಕಳನ್ನು ಕೊಡುವವರು ಮತ್ತು ಪಡೆಯುವವರು ಮುಂದೆ ಮಕ್ಕಳಿಗೆ ಯಾವುದೇ ತೊಂದರೆಗಳು ಆಗಬಾರದು ಎಂದರೆ, ಕಾನೂನಿನ ಮೂಲಕ ದತ್ತು ಪಡೆದರೆ ಯಾವುದೇ ತೊಂದರೆಗಳು ಮತ್ತು ಅಡಚಣೆಗಳು ಬರುವುದಿಲ್ಲ. ಆದ್ದರಿಂದ ಇದರ ಕುರಿತು ಜನರಿಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದು ಹೇಳಿದರು.

​ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ನೂರಜಹಾನ ಕಿಲ್ಲೇದಾರ, ರವಿ ಭಂಡಾರಿ, ಎಕ್ಸಲರೆಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್‍ನ ಮೆಂಟರ್ ಪ್ರಕಾಶ ಹಳಿಯಾಳ ಸೇರಿದಂತೆ ಬಾಲಮಂದಿರಗಳು, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098 ಹಾಗೂ ವಿವಿಧ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *