ಹನೂರಿನಲ್ಲಿ ಕೆಎಸ್‌ಆರ್‌ಟಿಸಿ ನೂತನ ಬಸ್ ಘಟಕ ನಿರ್ಮಾಣಕ್ಕೆ ಸಚಿವ ಸಿ. ಪುಟ್ಟರಂಗಶೆಟ್ಟಿ ಶಂಕುಸ್ಥಾಪನೆ

Spread the love

ವರದಿ: ಕಾರ್ತಿಕ್ ಗೌಡ, ಹನೂರು

ಹನೂರು: ತಾಲೂಕು ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿಯ ನೂತನ ಬಸ್ ಘಟಕ ನಿರ್ಮಾಣ ಕಾರ್ಯಕ್ಕೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹನೂರು ಭಾಗದಲ್ಲಿ ಸುಸಜ್ಜಿತ ಬಸ್ ಘಟಕ ನಿರ್ಮಾಣವಾದ ನಂತರ ಗ್ರಾಮೀಣ ಹಾಗೂ ಕಾಡಂಚಿನ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಸಂಚಾರ ಕಲ್ಪಿಸಲು ಸಾರಿಗೆ ನಿಗಮಕ್ಕೆ ಅನುಕೂಲವಾಗಲಿದೆ. ಇದರಿಂದ ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ ಎಂದರು.

ನೂತನ ಘಟಕದಲ್ಲಿ ವಾಹನ ದುರಸ್ತಿ ಅಂಕಣ, ವಾಷಿಂಗ್ ರ್ಯಾಂಪ್ ಹಾಗೂ ಇಂಧನ ತುಂಬಿಸುವ ಟ್ಯಾಂಕ್ ವ್ಯವಸ್ಥೆ ಇರಲಿದೆ. ಹೀಗಾಗಿ ಬಸ್‌ಗಳ ನಿರ್ವಹಣೆ ಸ್ಥಳೀಯವಾಗಿಯೇ ನಡೆಯಲಿದ್ದು, ತಾಂತ್ರಿಕ ಕಾರಣಗಳಿಂದ ಬಸ್‌ಗಳು ರದ್ದಾಗುವ ಸಾಧ್ಯತೆ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಹನೂರು ತಾಲೂಕಿನ ಜನರ ಬಹುದಿನದ ಕನಸು ಇಂದು ನನಸಾಗಿದೆ. ನೂತನ ಬಸ್ ಘಟಕದಿಂದ 170ಕ್ಕೂ ಹೆಚ್ಚು ಗ್ರಾಮಗಳಿಗೆ ಸಾರಿಗೆ ಸಂಪರ್ಕ ದೊರೆಯಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು ಹಾಗೂ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗದ ವತಿಯಿಂದ ಕಸಬಾ ಹೋಬಳಿಯ ಮಂಗಲ ಗ್ರಾಮದ ಸರ್ವೇ ನಂ. 430/A1A ಹಾಗೂ ಲೊಕ್ಕನಹಳ್ಳಿ ಹೋಬಳಿಯ ಕಣ್ಣೂರು ಗ್ರಾಮದ ಸರ್ವೇ ನಂ. 1/B1 ವ್ಯಾಪ್ತಿಯ ಒಟ್ಟು 4 ಎಕರೆ 50 ಸೆಂಟ್ಸ್ ಜಾಗದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ ಬಸ್ ಘಟಕ ನಿರ್ಮಾಣವಾಗಲಿದೆ. ಮಳೆಗಾಲದ ಅವಧಿಯನ್ನು ಹೊರತುಪಡಿಸಿ 12 ತಿಂಗಳೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್. ನರೇಂದ್ರ, ಜಿಲ್ಲಾಧಿಕಾರಿ ಶ್ರೀ ರೂಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಡಿಪೊ ವ್ಯವಸ್ಥಾಪಕ ಬೋಗ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *