16 ಕೋಟಿ ವೆಚ್ಚದಲ್ಲಿ ಹನೂರಿಗೆ ಅತ್ಯಾಧುನಿಕ ಪ್ರಜಾಸೌಧ: ಶಾಸಕ ಎಂ.ಆರ್. ಮಂಜುನಾಥ್‌ರಿಂದ ಗುದ್ದಲಿ ಪೂಜೆ

Spread the love

ಹನೂರು: ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಹನೂರು ತಾಲೂಕಿನ ಮಂಗಲ ಗ್ರಾಮದ ಹುಲಸುಗುಡ್ಡೆ ಬೋರೆ ಬಳಿ ಶಾಸಕ ಎಂ.ಆರ್. ಮಂಜುನಾಥ್ ಅವರು ಗಂಗೆಪೂಜೆ ಹಾಗೂ ಸ್ಥಳಶುದ್ಧಿ ಪೂಜೆ ನೆರವೇರಿಸುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಪ್ರಜಾಸೌಧದ ಮಾದರಿ ನಕ್ಷೆಯನ್ನು ಪ್ರದರ್ಶಿಸಿದ ಶಾಸಕರು, ಸಾರ್ವಜನಿಕರಿಗೆ ಎಲ್ಲಾ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ದೊರೆಯುವಂತೆ ಸುಸಜ್ಜಿತ ಕಟ್ಟಡ ನಿರ್ಮಿಸುವುದು ಯೋಜನೆಯ ಉದ್ದೇಶ ಎಂದು ತಿಳಿಸಿದರು.

 

ನೂತನ ಪ್ರಜಾಸೌಧದ ಕನಸು ಒಂದು ದಶಕದ ಹಿಂದಿನದ್ದು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನುಮೋದನೆ ದೊರೆತರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ತಾವು ಶಾಸಕರಾದ ಬಳಿಕ ನಿರಂತರ ಅನುಸರಣೆ ನಡೆಸಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು 2024-25ರಲ್ಲಿ ಭರವಸೆ ನೀಡಿದ್ದರು. ಇದೀಗ ಅನುದಾನ ಮಂಜೂರಾಗಿ ಕಾಮಗಾರಿಗೆ ಚಾಲನೆ ದೊರೆತಿರುವುದು ಸಂತಸದ ಸಂಗತಿ ಎಂದು ಹೇಳಿದರು.

 

*16 ಕೋಟಿ ವೆಚ್ಚದ ಅತ್ಯಾಧುನಿಕ ಕಟ್ಟಡದ ಗುರಿ*

 

ಪ್ರಸ್ತುತ 8 ಕೋಟಿ ಅನುದಾನದಲ್ಲಿ ಬಿ-ಸಿ ಗ್ರೇಡ್ ಕಟ್ಟಡಕ್ಕೆ ಅನುಮೋದನೆ ದೊರೆತಿದೆ. ಆದರೆ ಹನೂರಿಗೆ ಸುಮಾರು 16 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸಿ ಗ್ರೇಡ್ ಕಟ್ಟಡವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದೇವೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.

 

ಪ್ರಜಾಸೌಧದ ವಿನ್ಯಾಸದಲ್ಲಿ ಗಾಳಿ, ಬೆಳಕು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ನೈಸರ್ಗಿಕ ಬೆಳಕು, ಗಾಳಿಯಿಂದ ವಿದ್ಯುತ್ ಬಳಕೆ ಕಡಿಮೆ, ಶೌಚಾಲಯದ ದುರ್ವಾಸನೆಗೆ ಪ್ರತ್ಯೇಕ ವೆಂಟ್ ವ್ಯವಸ್ಥೆ, ಲಿಫ್ಟ್ ಸೌಲಭ್ಯ ಅಳವಡಿಸಲಾಗಿದೆ. ಈ ಮಾದರಿ ವಿನ್ಯಾಸವನ್ನು ರಾಜ್ಯದ 53 ಕ್ಷೇತ್ರಗಳ ಪ್ರಜಾಸೌಧಗಳಿಗೂ ಕಳುಹಿಸಲಾಗಿದೆ ಎಂದರು.

 

ಹನೂರಿನ 100 ಹಾಸಿಗೆ ಆಸ್ಪತ್ರೆ ಕಟ್ಟಡಕ್ಕೂ ಇದೇ ವಿನ್ಯಾಸ ರೂಪಿಸಲಾಗಿದ್ದು, ಸದ್ಯ 50 ಹಾಸಿಗೆ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಹೆಚ್ಚುವರಿ 20 ಹಾಸಿಗೆ ಸೇರ್ಪಡೆಗೆ 14 ಕೋಟಿ ಅನುದಾನಕ್ಕೆ ಮುಖ್ಯ ಎಂಜಿನಿಯರ್‌ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

 

ಯಾವುದೇ ದೊಡ್ಡ ಯೋಜನೆಗೆ ಪೂರ್ವಸಿದ್ಧತೆ ಮುಖ್ಯ. ಪ್ರಜಾಸೌಧಕ್ಕಾಗಿ ಮೂರೂವರೆ ವರ್ಷದಿಂದ ಕಾಯುತ್ತಿದ್ದೆ. ಕಾಮಗಾರಿ ಬೇಗ ಪೂರ್ಣಗೊಂಡು ರೈತರು, ಸಾರ್ವಜನಿಕರು ಭೂಮಿ, ಕಂದಾಯ ದಾಖಲೆಗಳಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪಿ, ಒಂದೇ ಸೂರಿನಡಿ ಸೇವೆ ಸಿಗಬೇಕು ಎಂಬುದು ಆಶಯ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಮಾಜಿ ಜಿ.ಪಂ ಸದಸ್ಯ ಸಾಗ್ಯ ಬಾಬಣ್ಣ, ಚಾಮುಲ್ ನಿರ್ದೇಶಕ ಉದ್ದನೂರು ಮಹದೇವಪ್ರಸಾದ್, ಸಿಂಗಾನಲ್ಲೂರು ರಾಜಣ್ಣ, ಗುರುಸ್ವಾಮಿ, ದೇವರಾಜು, ಇಂದುವಾಡಿ ಗೋವಿಂದ, ಕಿರಣ್ ಕುಮಾರ್, ಅಂಜುಂ ಪಾಷಾ, ನಟರಾಜು ಗೌಡ, ತಿರುಪತಿ, ಬಸವರಾಜು ಸೇರಿದಂತೆ ಸಾರ್ವಜನಿಕರು ಇದ್ದರು.

ವರದಿ ಕಾರ್ತಿಕ್ ಗೌಡ ಹನೂರು..


 

Leave a Reply

Your email address will not be published. Required fields are marked *