ಕುಂದಗೋಳ ತಾಲೂಕು ಗ್ಯಾರಂಟಿ ಅಧ್ಯಕ್ಷ ಸ್ಥಾನಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ…!

Spread the love

ವರದಿ: ಪಬ್ಲಿಕ್ ಸಮಾಚಾರ

ಕುಂದಗೋಳ: ದಿವಂಗತ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ಬಳಿಕ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಡಜನ್‌ಗಟ್ಟಲೆ ಮುಖಂಡರ ನಡುವಿನ ಒಳಜಗಳದಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಹುದ್ದೆಯೇ ಹಾವು-ಏಣಿ ಆಟಕ್ಕೆ ಸಾಕ್ಷಿಯಾಗಿದೆ.

ಹೌದು, ಇಲ್ಲಿನ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ನಾಯಕರು ಪ್ರಭಾವ ಹೊಂದಿರುವ ಕಾರಣ ಇಂತಹ ಬೆಳವಣಿಗೆಗಳು ನಿರಂತರವಾಗಿ ನಡೆಯುತ್ತಿವೆ. ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಹುದ್ದೆ ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಬದಲಾಗಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕಾಂಗ್ರೆಸ್ ನಾಯಕರ ನಡುವಿನ ಹೊಂದಾಣಿಕೆ ಕೊರತೆ, ಪ್ರತಿಷ್ಠೆಯ ಜಗಳ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳು ಈಗ ಬಹಿರಂಗವಾಗಿ ಗೋಚರಿಸುತ್ತಿದ್ದು, ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ.

ತಾಲ್ಲೂಕಿನ ನಾಯಕರ ಒಳಜಗಳಕ್ಕೆ ಗ್ಯಾರಂಟಿ ಸಮಿತಿ ಅಧ್ಯಕ್ಷರ ಹುದ್ದೆಯೇ ಬಲಿಯಾಗುತ್ತಿರುವುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿಯಾಗಿವೆ. ಗ್ಯಾರಂಟಿ ಯೋಜನೆಗಳ ಸಮಿತಿಯ ಮೊದಲ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಶಿವಾನಂದ ಬೆಂತೂರ ಅವರನ್ನು ಯಾವುದೇ ಮುನ್ಸೂಚನೆ ನೀಡದೇ 2025ರ ಸೆಪ್ಟೆಂಬರ್ ತಿಂಗಳಲ್ಲಿ ದಿಢೀರ್ ಆಗಿ ಹುದ್ದೆಯಿಂದ ಕೆಳಗಿಳಿಸಲಾಯಿತು. ನಂತರ ಎರಡನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸತೀಶ ಕೊಬ್ಬಯ್ಯನವರ್ ಅವರ ಅಧಿಕಾರಾವಧಿಯೂ ದೀರ್ಘಕಾಲ ಉಳಿಯಲಿಲ್ಲ. ಮೇ 31, 2026ರವರೆಗೆ ಕೇವಲ ಕೆಲವೇ ತಿಂಗಳು ಕಾರ್ಯನಿರ್ವಹಿಸಿದ ಅವರನ್ನು ಕೂಡ ಹಠಾತ್ತಾಗಿ ತೆಗೆದುಹಾಕಲಾಗಿದೆ. ಸದ್ಯದ ರಾಜಕೀಯ ಬೆಳವಣಿಗೆಯಂತೆ ನೆಹರು ಪಾಟೀಲ ಅವರನ್ನು ಮೂರನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಆರು ತಿಂಗಳಿಗೊಮ್ಮೆ ಅಧ್ಯಕ್ಷರನ್ನು ಬದಲಾಯಿಸುತ್ತಾ ಹೋದರೆ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುವುದು ಹೇಗೆ? ಯೋಜನೆಗಳ ಪರಿಣಾಮಕಾರಿ ಉಸ್ತುವಾರಿ ನಡೆಸುವುದು ಹೇಗೆ? ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ನಾಯಕರ ಈ ‘ಮ್ಯೂಸಿಕಲ್ ಚೇರ್’ ಆಟದಿಂದ ಕಾರ್ಯಕರ್ತರು ಕೂಡ ಗೊಂದಲಕ್ಕೆ ಒಳಗಾಗಿದ್ದು, ಯಾರನ್ನು ನಾಯಕರೆಂದು ಒಪ್ಪಿಕೊಳ್ಳಬೇಕು ಎಂಬ ದ್ವಂದ್ವದಲ್ಲಿ ಸಿಲುಕಿದ್ದಾರೆ.

ಇನ್ನೊಂದೆಡೆ, ತಾಲ್ಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನವೂ ಕಳೆದ ಆರು ತಿಂಗಳಿನಿಂದ ಖಾಲಿಯೇ ಉಳಿದಿದ್ದು, ಈ ಸ್ಥಾನಕ್ಕೆ ಯಾವುದೇ ಅಂತಿಮ ನಿರ್ಧಾರವಾಗದೆ ನೆನೆಗುದಿಗೆ ಬಿದ್ದಿದೆ. ಈಗಾಗಲೇ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ತಾಲ್ಲೂಕು, ಆಡಳಿತ ಪಕ್ಷದ ನಾಯಕರ ಈ ಅಂತರ್ಯುದ್ಧದಿಂದಾಗಿ ಅಭಿವೃದ್ಧಿ ವಿಚಾರದಲ್ಲಿಯೂ ಮತ್ತಷ್ಟು ಹಿನ್ನಡೆ ಅನುಭವಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಧಿಕಾರಿಗಳ ಮೇಲೆ ಪರಿಣಾಮಕಾರಿ ಹಿಡಿತ ಸಾಧಿಸುವವರೇ ಇಲ್ಲದಂತಾಗಿದ್ದು, ತಾಲ್ಲೂಕಿನ ಪ್ರಗತಿ ಕುಂಠಿತಗೊಂಡಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಮುಂದಿನ ಎರಡು ವರ್ಷಗಳಲ್ಲಿ ವಿಧಾನಸಭಾ ಚುನಾವಣೆ ಸೇರಿದಂತೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳು ಎದುರಾಗಲಿವೆ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಪಕ್ಷವನ್ನು ಸಂಘಟಿಸಿ, ಒಗ್ಗಟ್ಟಿನಿಂದ ಮುನ್ನಡೆಸಬೇಕಾದ ನಾಯಕರು ಸ್ವಹಿತಾಸಕ್ತಿ ಹಾಗೂ ಒಳಜಗಳಗಳಲ್ಲಿ ತೊಡಗಿರುವುದು ತಳಮಟ್ಟದ ಕಾರ್ಯಕರ್ತರ ಧೃತಿಗೆಡುವಂತೆ ಮಾಡಿದೆ.

ನಾಯಕರ ಈ ಹೊಂದಾಣಿಕೆ ಕೊರತೆ ಹೀಗೆಯೇ ಮುಂದುವರಿದರೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Leave a Reply

Your email address will not be published. Required fields are marked *