ಮಲೆ ಮಾದೇಶ್ವರ ಬೆಟ್ಟದ ಹಾದಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ – ಆಂಬ್ಯುಲೆನ್ಸ್ ಸಿಗದೆ ನರಳಾಡಿದ ಗಾಯಾಳುಗಳು, ವ್ಯವಸ್ಥೆಯ ವಿರುದ್ಧ ಆಕ್ರೋಶ

Spread the love

ಹನೂರು: ಕೊಳ್ಳೇಗಾಲದಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಭಕ್ತಾದಿಗಳನ್ನು ಹೊತ್ತು ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಟ್ಟದ ಹಾದಿಯ ತಾಳುಬೆಟ್ಟದ ಮೂರನೇ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಭೀಕರವಾಗಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯ ನಂತರದ ಪರಿಸ್ಥಿತಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಬೇಜವಾಬ್ದಾರಿಯನ್ನು ಎತ್ತಿ ತೋರಿಸುವಂತಿತ್ತು.

​ಅಪಘಾತ ಸಂಭವಿಸಿದ ತಕ್ಷಣ ಸಹಾಯಕ್ಕಾಗಿ ಕಿರುಚಾಡಿದ ಪ್ರಯಾಣಿಕರಿಗೆ ನೆರವಾಗಲು ಅಲ್ಲಿನ ಭೌಗೋಳಿಕ ಸವಾಲುಗಳು ಅಡ್ಡಿಯಾದವು. ದುರಂತ ನಡೆದ ಜಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ, ತುರ್ತು ಸೇವೆಗೆ ಮಾಹಿತಿ ನೀಡಲು ಸಾರ್ವಜನಿಕರು ಮತ್ತು ಇತರ ವಾಹನ ಸವಾರರು ಹರಸಾಹಸ ಪಡಬೇಕಾಯಿತು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ಆಂಬ್ಯುಲೆನ್ಸ್ ವ್ಯವಸ್ಥೆಯ ವೈಫಲ್ಯ. ಅಪಘಾತ ನಡೆದು ಬರೋಬ್ಬರಿ ಎರಡು ಗಂಟೆಗಳ ಕಾಲ ಗಾಯಾಳುಗಳು ರಸ್ತೆಯಲ್ಲೇ ನೋವಿನಿಂದ ನರಳುತ್ತಿದ್ದರೂ ಒಂದೇ ಒಂದು ಆಂಬ್ಯುಲೆನ್ಸ್ ಸ್ಥಳಕ್ಕೆ ಬಾರದಿರುವುದು ಅಧಿಕಾರಿಗಳ ಅಕ್ಷಮ್ಯ ಅಪರಾಧದಂತೆ ಭಾಸವಾಗುತ್ತಿತ್ತು.

​ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಾದೇಶ್ವರ ಬೆಟ್ಟದಂತಹ ಸೂಕ್ಷ್ಮ ಹಾದಿಯಲ್ಲಿ ಪ್ರತಿದಿನ ಸಾವಿರಾರು ಜನರು ಸಂಚರಿಸುತ್ತಾರೆ. ಇಂತಹ ಕಡೆ ತುರ್ತು ಸಂದರ್ಭದಲ್ಲಿ ನೆರವಾಗಲು ಆಂಬ್ಯುಲೆನ್ಸ್ ಹಾಗೂ ನೆಟ್‌ವರ್ಕ್ ವ್ಯವಸ್ಥೆ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ನಿದ್ರಾವಸ್ಥೆಗೆ ಸಾಕ್ಷಿಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಗಾಯಾಳುಗಳನ್ನು ರಸ್ತೆಯಲ್ಲೇ ಬಿಟ್ಟಿದ್ದ ಘಟನೆಗೆ ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. “ಜೀವಗಳ ಜೊತೆ ಚೆಲ್ಲಾಟವಾಡುತ್ತಿರುವ ಇಲಾಖೆಗಳಿಗೆ ಬೆಲೆಬಾಳುವ ಪ್ರಾಣಗಳ ಬಗ್ಗೆ ಕಾಳಜಿ ಇಲ್ಲವೇ?” ಎಂದು ಸ್ಥಳೀಯರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ಘಾಟ್ ಪ್ರದೇಶಗಳಲ್ಲಿ ಕನಿಷ್ಠ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.

ವರದಿ: ಕಾರ್ತಿಕ್ ಗೌಡ, ಹನೂರು

Leave a Reply

Your email address will not be published. Required fields are marked *