​ಕೋಲ್ಕತ್ತಾದಲ್ಲಿ ಶಿರೂರ ಬಿಎಸ್‌ಎಫ್ ಯೋಧ ನಿಧನ: ನಾಳೆ ಸಂಜೆ ಶಿರೂರ ಗ್ರಾಮಕ್ಕೆ ಪಾರ್ಥಿವ ಶರೀರ ಆಗಮನದ ನಿರೀಕ್ಷೆ

Spread the love

ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದ ಹೆಮ್ಮೆಯ ಪುತ್ರ, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ ಸಂತೋಷ ರಾಮಪ್ಪ ಹೊನ್ನಪ್ಪನವರ ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕರ್ತವ್ಯದಲ್ಲಿದ್ದಾಗ ಬುಧವಾರ ರಾತ್ರಿ ಅಕಾಲಿಕವಾಗಿ ನಿಧನರಾಗಿದ್ದಾರೆ.

​ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಅವರು, ದೇಶದ ವಿವಿಧ ಗಡಿ ಭಾಗಗಳಲ್ಲಿ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ತಿಳಿದು ಗ್ರಾಮಸ್ಥರು ಹಾಗೂ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ.

ಕುಟುಂಬದ ಆಧಾರಸ್ತಂಭ:

ಮೃತ ಯೋಧ ಸಂತೋಷ ಅವರು ಅಂದಾಜು ೭-೮ ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಪತ್ನಿ ಹಾಗೂ ಒಂದು ಪುಟ್ಟ ಮಗು ಇದೆ. ದೇಶಸೇವೆಯಲ್ಲಿದ್ದ ಯುವಕನ ಅಕಾಲಿಕ ನಿರ್ಗಮನದಿಂದ ಶಿರೂರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

ನಾಳೆ ಅಂತ್ಯಕ್ರಿಯೆ ಸಾಧ್ಯತೆ:

ಯೋಧನ ಪಾರ್ಥಿವ ಶರೀರವು ಶುಕ್ರವಾರ (ನಾಳೆ) ಸಂಜೆಯ ವೇಳೆಗೆ ಸ್ವಗ್ರಾಮ ಶಿರೂರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಗ್ರಾಮಕ್ಕೆ ಪಾರ್ಥಿವ ಶರೀರ ಬಂದ ನಂತರ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲ್ಲೂಕಿನ ಗಣ್ಯರು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *