
ಧಾರವಾಡ: “ಕಾನೂನು ಎನ್ನುವುದು ಕೇವಲ ನ್ಯಾಯ ಪಡೆಯುವ ಮಾರ್ಗವಲ್ಲ, ನ್ಯಾಯಾಲಯಗಳ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದೇ ನಿಜವಾದ ನ್ಯಾಯ,” ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಅವರು ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ‘ಕಾನೂನು ಮತ್ತು ನ್ಯಾಯ ಮಂಟಪ’ ಆಯೋಜಿಸಿದ್ದ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯವೇ ಸಮಾಜದ ಭದ್ರಬುನಾದಿಯಾಗಿದ್ದು, ಕಾನೂನಿನ ವಿಸ್ತೃತ ಫಲಿತಾಂಶಗಳು ನಮಗೆ ಸದಾ ದಾರಿದೀಪವಾಗಿರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಧಾರವಾಡ ಹೈಕೋರ್ಟ್ ಪೀಠದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಮಾತನಾಡಿ, “ಕಳೆದ one hundred and thirty-six ವರ್ಷಗಳಿಂದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡು ಮತ್ತು ನುಡಿಯ ಸೇವೆ ಮಾಡುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂದು ಸಮಾಜದಲ್ಲಿ ಕರ್ತವ್ಯದ ಅರಿವು ಮೂಡಿಸುವಲ್ಲಿ ಈ ಕಾನೂನು ಮತ್ತು ನ್ಯಾಯ ಮಂಟಪವು ಪ್ರಮುಖ ಪಾತ್ರ ವಹಿಸಬೇಕಿದೆ,” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಹಾಗೂ ಸಂಘದ ಗೌರವ ಉಪಾಧ್ಯಕ್ಷರಾದ ಡಾ. ಪಾಂಡುರಂಗ ಪಾಟೀಲ ಅವರು ಮಾತನಾಡಿ, ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಷ್ಟೇ ಅಭಿವೃದ್ಧಿಯಲ್ಲ. ಮಾನವನ ಸರ್ವಾಂಗೀಣ ನಾಗರಿಕ ವಿಕಾಸವೇ ನಿಜವಾದ ಪ್ರಗತಿ. ಇಂದು ನ್ಯಾಯಾಲಯಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಪ್ರಕರಣಗಳು ದಾಖಲಾಗುತ್ತಿರುವುದು ವಿಷಾದನೀಯ. ಜನರು ತಮ್ಮ ಕರ್ತವ್ಯಗಳ ಬಗ್ಗೆ ಪರಿಜ್ಞಾನ ಹೊಂದಿದರೆ ಇಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಈಶಪ್ಪ ಭೂತೆ ಹಾಗೂ ಬಿ.ಡಿ. ಹಿರೇಮಠ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಮೇಲಿರುವ ಅಭಿಮಾನದಿಂದ ಇಬ್ಬರೂ ಗಣ್ಯರು ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗಾಗಿ ತಲಾ twenty-five thousand ರೂಪಾಯಿಗಳ ದೇಣಿಗೆಯನ್ನು ಘೋಷಿಸಿದರು.
ಕಾರ್ಯಕ್ರಮದಲ್ಲಿ ಪ್ರಮೀಳಾ ಜಕ್ಕಣ್ಣವರ ಹಾಗೂ ಪುಷ್ಪಾ ಒಂಟಿಗೋಡಿ ಪ್ರಾರ್ಥಿಸಿದರು. ಮಂಟಪದ ಸಂಚಾಲಕ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರೆ, ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ಅತಿಥಿಗಳನ್ನು ಪರಿಚಯಿಸಿದರು, ಮಂಗಳಗೌರಿ ಹಿರೇಮಠ ನಿರೂಪಿಸಿ, ಡಾ. ಚಂದ್ರಶೇಖರ ರೊಟ್ಟಿಗವಾಡ ವಂದಿಸಿದರು. ಶಂಕರ ಕುಂಬಿ, ಡಾ. ಶೈಲಜಾ ಅಮರಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

