
ಕುಂದಗೋಳ: ತಾಲ್ಲೂಕಿನ ಬೆಟದೂರು ಗ್ರಾಮದ ಚೇತನಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಪೋಷಕರೇ ಶಿಕ್ಷಕರಾಗಿ–ಒಂದು ದಿನ ಮಕ್ಕಳೊಂದಿಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪೋಷಕರಿಗೆ ಒಂದು ದಿನ ಶಿಕ್ಷಕರಾಗಿ ಮಕ್ಕಳಿಗೆ ಬೋಧಿಸುವ ಅವಕಾಶ ಕಲ್ಪಿಸಲಾಗಿತ್ತು. ಪೋಷಕರು ತಮ್ಮ ವೃತ್ತಿ, ಜೀವನಾನುಭವ ಹಾಗೂ ವಿವಿಧ ಕೌಶಲ್ಯಗಳ ಕುರಿತು ಮಕ್ಕಳಿಗೆ ಸರಳವಾಗಿ ತಿಳಿಸಿಕೊಟ್ಟರು. ಮಕ್ಕಳು ಪಠ್ಯಪುಸ್ತಕಗಳಿಂದ ಮಾತ್ರವಲ್ಲದೆ ಸಮಾಜದ ನೈಜ ಅನುಭವಗಳಿಂದಲೂ ಕಲಿಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ಕಡೇಮನಿ ಮಾತನಾಡಿ, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಪಾಠ ಬೋಧನೆಯ ಜೊತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಶಿಕ್ಷಕರ ಸೇವೆ ಸಮಾಜ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ವಿನೂತನ ಕಾರ್ಯಕ್ರಮದಲ್ಲಿ ಒಂದು ದಿನದ ಶಿಕ್ಷಕರಾಗಿ ಪೂರ್ಣಿಮಾ ನಡೂರಮಠ, ವೀಣಾ ಹಕ್ಕಿ, ಸ್ವಾತಿ ಕುಸುಗಲ್, ಸರಸ್ವತಿ ಸರಾಸರಿ, ಬಸವರಾಜ ಕಾಳೆ, ಗೀತಾ ಕಾಳೆ ಹಾಗೂ ರೇಖಾ ನಾರಾಯಣಪೂರ ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಭಾರತಿ ಮಜ್ಜಿಗುಡ್ಡ, ಶಿಕ್ಷಕಿಯರಾದ ರಾಜೇಶ್ವರಿ ಬಳ್ಳಾರಿ, ಲಕ್ಷ್ಮೀ ಸೋಮಣ್ಣವರ, ಸಂಜನಾ, ಪಲವಿ, ನಯನಾ ಸೇರಿದಂತೆ ಪೋಷಕರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

