ಮಲೆ ಮಹದೇಶ್ವರ ಬೆಟ್ಟದಲ್ಲಿ ಇತಿಹಾಸ: ಕೇವಲ 28 ದಿನಗಳಲ್ಲಿ 3.41 ಕೋಟಿ ರೂ. ಹುಂಡಿ ಹಣ ಸಂಗ್ರಹ

Spread the love

ಹನೂರು: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಬುಧವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ತಿಂಗಳಿಗೂ ಕಡಿಮೆ ಅವಧಿಯಲ್ಲಿ ಬರೋಬ್ಬರಿ 3.41 ಕೋಟಿ ರೂಪಾಯಿ ನಗದು ಸಂಗ್ರಹವಾಗುವ ಮೂಲಕ ಮಾದಪ್ಪನ ಬೆಟ್ಟದಲ್ಲಿ ದಾಖಲೆ ಬರೆಯಲಾಗಿದೆ.

​ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಅವರ ಸಮ್ಮುಖದಲ್ಲಿ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಬಿಗಿ ಭದ್ರತೆಯೊಂದಿಗೆ ಹುಂಡಿ ಎಣಿಕೆ ಕಾರ್ಯ ಜರುಗಿತು. ಕಳೆದ ಅಕ್ಟೋಬರ್‌ನಿಂದ ಈವರೆಗಿನ ಎಣಿಕೆಗಳ ಪೈಕಿ ಇದು ಅತ್ಯಧಿಕ ಮೊತ್ತವಾಗಿದ್ದು, ಕೇವಲ 28 ದಿನಗಳ ಅಂತರದಲ್ಲಿ ಒಟ್ಟು 3,41,44,208 ರೂಪಾಯಿ ನಗದು ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

​ನಗದಿನ ಜೊತೆಗೆ ಭಕ್ತರು ಮಾದಪ್ಪನಿಗೆ ಭಕ್ತಿಪೂರ್ವಕವಾಗಿ 71 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯ ಆಭರಣಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ವಿಶೇಷವಾಗಿ ಇ-ಹುಂಡಿ ಮೂಲಕ 6,55,620 ರೂಪಾಯಿ ಜಮಾವಣೆಯಾಗಿದ್ದು, ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 6 ನೋಟುಗಳು ಹಾಗೂ 19 ವಿದೇಶಿ ನೋಟುಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿವೆ.

​ಇತ್ತೀಚೆಗೆ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ, ಸರಣಿ ಸರ್ಕಾರಿ ರಜಾ ದಿನಗಳು ಹಾಗೂ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿರುವುದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಈ ದಾಖಲೆ ಮಟ್ಟದ ಕಾಣಿಕೆ ಸಂಗ್ರಹಕ್ಕೆ ಪ್ರಮುಖ ಕಾರಣವೆನ್ನಲಾಗಿದೆ. ಎಣಿಕೆ ಕಾರ್ಯದ ಸಂದರ್ಭದಲ್ಲಿ ಪ್ರಾಧಿಕಾರದ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ: ಬಂಗಾರಪ್ಪ ಸಿ., ಹನೂರು

Leave a Reply

Your email address will not be published. Required fields are marked *