ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಮುಖ್ಯ ಶಿಕ್ಷಕಿ ಶಾಂತಾ ಹೂಗಾರ ಮರುನೇಮಕ: ಹಿರೇಹರಕುಣಿ ಗ್ರಾಮಸ್ಥರಲ್ಲಿ ಮೂಡಿದ ಹರ್ಷ

Spread the love

ಕುಂದಗೋಳ: ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ಹೂಗಾರ ಅವರ ಅಮಾನತು ಆದೇಶವನ್ನು ಖಂಡಿಸಿ ಗ್ರಾಮಸ್ಥರು, ಪಾಲಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಬುದುವಾರದಂದು ಶಾಲಾ ಆವರಣದಲ್ಲಿ ಮಹನೀಯರ ಭಾವಚಿತ್ರಗಳನ್ನು ಇರಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಮಹಾದೇವಿ ಮಾಡಲಗೇರಿ ಹಾಗೂ ತಹಶೀಲ್ದಾರ ರಾಜು ಮಾವರಕರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಇಒ ಮಹಾದೇವಿ ಮಾಡಲಗೇರಿ, ಗ್ರಾಮದ ಹಿರಿಯರು, ಪಾಲಕರು ಹಾಗೂ ಶಾಲಾ ಸಮುದಾಯದ ಸಹಕಾರವನ್ನು ಪರಿಗಣಿಸಿ, ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮುಖ್ಯ ಶಿಕ್ಷಕಿ ಶಾಂತಾ ಹೂಗಾರ ಅವರನ್ನು ಮರು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಶಿಕ್ಷಣದ ನಿರಂತರತೆ ಕಾಪಾಡುವುದು ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಇದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದ್ದು, ಶಾಂತಾ ಹೂಗಾರ ಅವರನ್ನು ಹಿರೇಹರಕುಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮರು ನಿಯೋಜಿಸಲಾಗಿದೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ತೆಗೆದುಕೊಳ್ಳಲಾದ ಈ ಕ್ರಮದಿಂದ ಸ್ಥಳೀಯರಲ್ಲಿ ಸಂತಸ ವ್ಯಕ್ತವಾಗಿದ್ದು, ಎಲ್ಲ ವಿದ್ಯಾರ್ಥಿಗಳು ನಾಳೆಯಿಂದ ನಿಯಮಿತವಾಗಿ ಶಾಲೆಗೆ ಹಾಜರಾಗಿ ತಮ್ಮ ಶಿಕ್ಷಣ ಚಟುವಟಿಕೆಗಳನ್ನು ಮುಂದುವರಿಸಲಿದ್ದಾರೆ ಎಂದು ಬಿಇಒ ತಿಳಿಸಿದರು.

ಅದರಂತೆ ಹಿರೇಹರಕುಣಿ ಗ್ರಾಮದ ಗುರು-ಹಿರಿಯರು, ವಿಧಾರ್ಥಿಗಳು, ಗ್ರಾಮ ಶಿಕ್ಷಣ ಸಮಿತಿ ಸದಸ್ಯರು. ಮುಖ್ಯ ಶಿಕ್ಷಕಿ ಶಾಂತಾ ಹೂಗಾರ ಅವರನ್ನು ಹೂಗುಚ್ಚ ನೀಡಿ ಅದ್ದುರಿಯಾಗಿ ಶಾಲೆಗೆ ಭರಮಾಡಿಕೊಂಡು. ಗೌರವಿಸಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾಮ ಶಿಕ್ಷಣ ಸಮೀತಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *