
ವರದಿ: ಕಾರ್ತಿಕ್ ಗೌಡ, ಹನೂರು
ಹನೂರು: ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ ಕರಿಕಲ್ಲುಗುಡ್ಡದಲ್ಲಿ ಅರಣ್ಯಾಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆದ ಬೆಚ್ಚಿಬೀಳಿಸುವ ಘಟನೆ ಬೆನ್ನಲ್ಲೇ, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮತ್ತೊಂದು ಅಮಾನವೀಯ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ.
ಹನೂರು ವಲಯದ ಉಡುತೊರೆಹಳ್ಳ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನೀರು ಕುಡಿಯಲು ಬಂದಿದ್ದ ಕಡವೆಯನ್ನು ದುಷ್ಕರ್ಮಿಗಳು ನಾಡಬಂದೂಕಿನಿಂದ ಗುಂಡು ಹಾರಿಸಿ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಕಡವೆಯ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ಮಾಂಸವನ್ನು ಚೀಲದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಕಡವೆ ಮಾಂಸ ತುಂಬಿದ್ದ ಚೀಲಗಳನ್ನು ಸ್ಥಳದಲ್ಲೇ ಬಿಟ್ಟು, ದಟ್ಟ ಅರಣ್ಯದೊಳಗೆ ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಸ್ಥಳದಲ್ಲಿ ಕಡವೆಯ ಮಾಂಸ ಹಾಗೂ ಬೇಟೆಗೆ ಸಂಬಂಧಿಸಿದ ಕುರುಹುಗಳು ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ಬಫರ್ ವಲಯದ ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಬೇಟೆಗಾರರ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.

