ಏಪ್ರಿಲ್ 30ರಂದು ಬಿಳಿಗಿರಿರಂಗನಬೆಟ್ಟದಲ್ಲಿ ಅದ್ದೂರಿ ಬ್ರಹ್ಮ ರಥೋತ್ಸವ: ಅಗತ್ಯ ಸಿದ್ಧತೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

Spread the love

ಚಾಮರಾಜನಗರ: ಜಿಲ್ಲೆಯ ಸುಪ್ರಸಿದ್ಧ ಯಾತ್ರಾಕ್ಷೇತ್ರ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮರಥೋತ್ಸವವು ಏಪ್ರಿಲ್ 30ರಂದು ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಯಾವುದೇ ಲೋಪವಾಗದಂತೆ ಕುಡಿಯುವ ನೀರು, ಸಾರಿಗೆ ಹಾಗೂ ಭದ್ರತೆ ಸೇರಿದಂತೆ ಸಕಲ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದಲ್ಲಿ ನಡೆದ ರಥೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ರಥೋತ್ಸವದ ಸಂದರ್ಭದಲ್ಲಿ ಭಾರಿ ಸಂಖ್ಯೆಯ ಜನಸಾಗರ ಸೇರುವುದರಿಂದ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕಾಗಿ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ, ಪ್ರತ್ಯೇಕ ವಾಟರ್ ಟ್ಯಾಂಕ್‌ಗಳ ವ್ಯವಸ್ಥೆ ಮಾಡಬೇಕು. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಂಸದ ಸುನೀಲ್ ಬೋಸ್ ಅವರು ಪ್ರಸಾದದ ವ್ಯವಸ್ಥೆ ಮಾಡುತ್ತಿದ್ದು, ಊಟದ ತಯಾರಿಕೆ ಮತ್ತು ವಿತರಣೆಗೆ ಅಗತ್ಯವಿರುವ ಸ್ಥಳಾವಕಾಶ ಹಾಗೂ ಅಗತ್ಯ ಸಿದ್ಧತೆಗಳನ್ನು ಮುತುವರ್ಜಿಯಿಂದ ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾರಿಗೆ ವ್ಯವಸ್ಥೆಯ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕರು, ವಿವಿಧ ಭಾಗಗಳಿಂದ ಭಕ್ತರನ್ನು ಕರೆತರಲು ಹೆಚ್ಚಿನ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ನಿಯೋಜಿಸಬೇಕು. ಬಸ್ ನಿಲ್ದಾಣದಲ್ಲಿ ಬಿಸಿಲಿನ ಬೇಗೆ ತಡೆಯಲು ಶಾಮಿಯಾನ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಬೆಟ್ಟದ ರಸ್ತೆಯ ಚೆಕ್‌ಪೋಸ್ಟ್‌ನಿಂದ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ಇರುವುದರಿಂದ ಭಕ್ತರಿಗೆ ಸಂಚಾರ ಸುಗಮಗೊಳಿಸಲು ಹೆಚ್ಚಿನ ಬಸ್‌ಗಳು ಕಾರ್ಯನಿರ್ವಹಿಸಬೇಕು. ಅಲ್ಲದೆ, ಬೆಟ್ಟಕ್ಕೆ ತೆರಳುವ ರಸ್ತೆಯ ಹಳ್ಳಕೊಳ್ಳಗಳನ್ನು ತಕ್ಷಣವೇ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ತಿಳಿಸಿದರು.


​ಕ್ಷೇತ್ರದ ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು. ರಥೋತ್ಸವದ ಅವಧಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಇರಬೇಕು ಹಾಗೂ ಅಗ್ನಿಶಾಮಕ ದಳ ಸನ್ನದ್ಧವಾಗಿರಬೇಕು. ಹೆಚ್ಚುವರಿ ಪೌರಕಾರ್ಮಿಕರನ್ನು ನಿಯೋಜಿಸುವ ಮೂಲಕ ಕಸ ವಿಲೇವಾರಿಯನ್ನು ತ್ವರಿತವಾಗಿ ಮಾಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು, ಎಸ್ಪಿ ಮುತ್ತುರಾಜು, ಎಸಿ ದಿನೇಶ್ ಕುಮಾರ್ ಮೀನಾ, ತಹಶೀಲ್ದಾರ್ ನಯನಾ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಅರ್ಚಕರು ಉಪಸ್ಥಿತರಿದ್ದರು.

ವರದಿ: ಕಾರ್ತಿಕ್ ಗೌಡ , ಹನೂರು

Leave a Reply

Your email address will not be published. Required fields are marked *