
ಬೆಂಗಳೂರು: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಬೆಂಗಳೂರಿನ ನೆಹರೂ ತಾರಾಲಯದಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಹುತಾತ್ಮ ಯೋಧರ ಸ್ಮರಣಾರ್ಥ ಸ್ತಂಭಕ್ಕೆ ಪುಷ್ಪನಮನ ಸಲ್ಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯೋಧರ ಕುಟುಂಬಗಳ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿ 27 ವರ್ಷಗಳ ಹಿಂದೆ ನಮ್ಮ ವೀರ ಯೋಧರು ಹಿಮಾಲಯದ ತಪ್ಪಲಿನಲ್ಲಿ ಶತ್ರುಗಳನ್ನು ಸೋಲಿಸಿ ದೇಶದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದರು. ಅವರು ಹುತಾತ್ಮರಾಗಿದ್ದರೂ ಅವರ ತ್ಯಾಗ, ಶೌರ್ಯ ಮತ್ತು ಪರಂಪರೆ ಶಾಶ್ವತವಾಗಿ ಉಳಿಯಲಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಯೋಧರಿಗೆ ಹೃತ್ಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ನಮ್ಮ ತಾಯ್ನಾಡಿನ ರಕ್ಷಣೆಗಾಗಿ 527 ಯೋಧರು ಹುತಾತ್ಮರಾಗಿದ್ದು, ಅವರಲ್ಲಿ ಕರ್ನಾಟಕದ 13 ಯೋಧರು ಸೇರಿದ್ದಾರೆ. ಭಾರತ-ಪಾಕಿಸ್ತಾನ ಯುದ್ಧವಾಗಲಿ, ಭಾರತ-ಚೀನಾ ಸಂಘರ್ಷವಾಗಲಿ ಅಥವಾ ಗಡಿ ಅತಿಕ್ರಮಣದಂತಹ ಯಾವುದೇ ಸವಾಲು ಎದುರಾದರೂ ನಮ್ಮ ಯೋಧರು ದೇಶದ ಗಡಿಯನ್ನು ರಕ್ಷಿಸಲು ಸದಾ ಸನ್ನದ್ಧರಾಗಿರುತ್ತಾರೆ. ಅವರ ತ್ಯಾಗ ಮತ್ತು ಸಮರ್ಪಣೆಯಿಂದಲೇ ದೇಶದ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಭಾರತದ ರಕ್ಷಣಾ ವ್ಯವಸ್ಥೆಗೆ ಕರ್ನಾಟಕ ಮಹತ್ವದ ಕೊಡುಗೆ ನೀಡಿದೆ. ಡಿಆರ್ಡಿಒ, ಇಸ್ರೋ ಸೇರಿದಂತೆ ಹಲವು ರಾಷ್ಟ್ರೀಯ ಸಂಸ್ಥೆಗಳು ರಾಜ್ಯದಲ್ಲೇ ಕಾರ್ಯನಿರ್ವಹಿಸುತ್ತಿವೆ. ಭಾರತದ ಮೊದಲ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಅಮೂಲ್ಯ ಸೇವೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಯೋಧರು, ಯುವಕರು, ಮಹಿಳೆಯರು, ರೈತರು ಹಾಗೂ ತೆರಿಗೆದಾರರು ನಮ್ಮ ಕೈಯ ಐದು ಬೆರಳುಗಳಿದ್ದಂತೆ. ಈ ಐದು ಶಕ್ತಿಗಳು ಒಂದಾದಾಗ ದೇಶ ಬಲಿಷ್ಠ ಮುಷ್ಟಿಯಂತೆ ರೂಪುಗೊಳ್ಳುತ್ತದೆ. ಕಾರ್ಗಿಲ್ ವಿಜಯ ದಿವಸವು ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಕಾಪಾಡುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ದಿನವಾಗಿದೆ. ದೇಶದ ಒಳಗಿನ ಹಾಗೂ ಹೊರಗಿನ ಯಾವುದೇ ದುಷ್ಟ ಶಕ್ತಿಗಳು ಭಾರತ ಮಾತೆಗೆ ತೊಂದರೆ ಉಂಟುಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಲಕ್ಷಾಂತರ ಯೋಧರ ಕುಟುಂಬಗಳು ವಾಸಿಸುತ್ತಿದ್ದು, ಅವರ ಕಲ್ಯಾಣ ಮತ್ತು ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಯೋಧರ ಕುಟುಂಬಗಳಿಂದ ಬರುವ ಸಲಹೆ ಮತ್ತು ಅಭಿಪ್ರಾಯಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅವರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಸೇನಾ ಅಧಿಕಾರಿಗಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

