
ಗದಗ: ನಗರೋತ್ಥಾನ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಸುಮಾರು ₹7.18 ಕೋಟಿ ಮೊತ್ತವು ಬಡ್ಡಿ ಸೇರಿ ಸುಮಾರು ₹7.60 ಕೋಟಿಗೆ ಏರಿಕೆಯಾದ ಹಿನ್ನೆಲೆಯಲ್ಲಿ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಗದಗ ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಪೀಠೋಪಕರಣಗಳು ಹಾಗೂ ಉಪಕರಣಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.
ನ್ಯಾಯಾಲಯದ ಆದೇಶದ ಅನ್ವಯ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಪ್ತಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಕಂಪ್ಯೂಟರ್ ಸೇರಿದಂತೆ ವಿವಿಧ ಕಚೇರಿ ಉಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.
ನಗರೋತ್ಥಾನ ಯೋಜನೆ ಕಾಮಗಾರಿಗೆ ಸಂಬಂಧಿಸಿದ ಬಾಕಿ ಹಣ ಪಾವತಿ ವಿಚಾರವಾಗಿ ಗುತ್ತಿಗೆದಾರ ಎಸ್.ಎಸ್. ಪೊಲೀಸ್ ಪಾಟೀಲ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಗುತ್ತಿಗೆದಾರರ ಪರವಾಗಿ ಆದೇಶ ನೀಡಿದ್ದು, ಅದರಂತೆ ಜಪ್ತಿ ಪ್ರಕ್ರಿಯೆ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಜಪ್ತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಗುತ್ತಿಗೆದಾರರ ಪರ ವಕೀಲ ಎಸ್.ಎಸ್. ಗಟ್ಟಿರಡ್ಡಿಹಾಳ ಅವರು ಉಪಸ್ಥಿತರಿದ್ದರು.

