ಲೋಕ ಕಲ್ಯಾಣಕ್ಕಾಗಿ ಕೈಗೊಂಡಿದ್ದ 33 ದಿನಗಳ ಕಠಿಣ ಶಿವಯೋಗ ಸಮಾಧಿ ಯಶಸ್ವಿ: ಭಕ್ತರಿಗೆ ದರ್ಶನ ನೀಡಿದ ರಾಚೋಟೇಶ್ವರ ಶ್ರೀಗಳು; ಸದ್ಯ ಆಸ್ಪತ್ರೆಗೆ ದಾಖಲು

Spread the love

ಗದಗ: ಜಿಲ್ಲೆಯ ಗದಗ ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಪ್ರಸಿದ್ಧ ಬೂದೀಶ್ವರ ಮಠದ ಉತ್ತರಾಧಿಕಾರಿಯಾದ ಪೂಜ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಲೋಕ ಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಕೈಗೊಂಡಿದ್ದ 33 ದಿನಗಳ ಕಠಿಣ ಶಿವಯೋಗ ಸಮಾಧಿ ಮತ್ತು ಮೌನಾನುಷ್ಠಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಸುಮಾರು 10:30ಕ್ಕೆ ಶ್ರೀಗಳು ಗರ್ಭಗುಡಿಯಿಂದ ಹೊರಬಂದು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ಈ ಅಪರೂಪದ ಕ್ಷಣವು ನೆರೆದಿದ್ದ ಲಕ್ಷಾಂತರ ಭಕ್ತರ ಪಾಲಿಗೆ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿ ಪರಿಣಮಿಸಿತು. ಆದರೆ, ಶ್ರೀಗಳ ಆರೋಗ್ಯದಲ್ಲಿ ಸಣ್ಣಮಟ್ಟದ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ನಿಗಾ ಮತ್ತು ಚಿಕಿತ್ಸೆಗಾಗಿ ಗದಗಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

33 ದಿನಗಳ ಕಠಿಣ ವ್ರತ ಮತ್ತು ಕಲ್ಲಿನ ಗರ್ಭಗುಡಿಯ ಸಮಾಧಿ

ಶ್ರೀಗಳು ಜೂನ್ 3ರಂದು ಮುಂಜಾನೆ ಮೌನಾನುಷ್ಠಾನಕ್ಕಾಗಿ ಹೊಸದಾಗಿ ಕಲ್ಲು, ಸಿಮೆಂಟ್ ಹಾಗೂ ಕಾಂಕ್ರೀಟ್‌ನಿಂದ ನಿರ್ಮಿಸಲಾದ ವಿಶೇಷ ಗರ್ಭಗುಡಿಯನ್ನು ಪ್ರವೇಶಿಸಿದ್ದರು. ಮಠದ ಮಾಹಿತಿಯ ಪ್ರಕಾರ, ಅವರು ಸತತ 33 ದಿನಗಳ ಕಾಲ ಅನ್ನ, ನೀರು ಮತ್ತು ಗಾಳಿಯಿಲ್ಲದೆ ಕೇವಲ ಶಿವಲಿಂಗದ ಸನ್ನಿಧಿಯಲ್ಲಿ ಶಿವಯೋಗ ಸಮಾಧಿಸ್ಥರಾಗಿದ್ದರು. ಈ ಅವಧಿಯಲ್ಲಿ ಲೋಕ ಕಲ್ಯಾಣ, ವಿಶ್ವಶಾಂತಿ, ಸಕಾಲದಲ್ಲಿ ಮಳೆ-ಬೆಳೆ ಹಾಗೂ ರೈತರ ಸಮೃದ್ಧಿಗಾಗಿ ತಪಸ್ಸು ನಡೆಸಿದ್ದರು ಎಂದು ಮಠದ ಮೂಲಗಳು ತಿಳಿಸಿವೆ.

ಶ್ರೀಗಳ ಹಿನ್ನೆಲೆ ಹಾಗೂ ಕಠಿಣ ಆಹಾರ ಪದ್ಧತಿ

ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದವರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, 2014-15ರಲ್ಲಿ ಅಂತೂರ-ಬೆಂತೂರ ಬೂದೀಶ್ವರ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಕಳೆದ 19 ವರ್ಷಗಳಿಂದ ಅವರು ಕೇವಲ ಹಾಲು ಮತ್ತು ಶೇಂಗಾ ಕಾಳುಗಳನ್ನು ಮಾತ್ರ ಸೇವಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಾರಿ ಮೌನಾನುಷ್ಠಾನಕ್ಕೆ ಮುನ್ನ ಅವರು ಬೇವಿನ ರಸ ಹಾಗೂ ಪತ್ರಿ ರಸವನ್ನು ಮಾತ್ರ ಸೇವಿಸಿ ಸಮಾಧಿಸ್ಥರಾಗಿದ್ದರು ಎಂಬುದು ವಿಶೇಷ.

ಹಿಂದೆ ನಡೆದಿದ್ದ ಕಠಿಣ ಅನುಷ್ಠಾನಗಳು

ರಾಚೋಟೇಶ್ವರ ಶ್ರೀಗಳು ಈ ಹಿಂದೆಯೂ ಲೋಕ ಕಲ್ಯಾಣಕ್ಕಾಗಿ ಹಲವು ಕಠಿಣ ವ್ರತಗಳನ್ನು ಕೈಗೊಂಡಿದ್ದಾರೆ. ಸುಮಾರು ಆರು ವರ್ಷಗಳ ಹಿಂದೆ ಗದಗದ ಕಪೋತಗಿರಿಯಲ್ಲಿ (ಕಪ್ಪತ್ತಗುಡ್ಡ) 21 ದಿನಗಳ ಮೌನಾನುಷ್ಠಾನ ನಡೆಸಿದ್ದರು. ಅದಕ್ಕೂ ಮುನ್ನ 2018ರಲ್ಲಿ ಇದೆ ಅಂತೂರ ಬೆಂತೂರ, ಗ್ರಾಮದ ಮಠದಲ್ಲಿ 11 ದಿನಗಳ ಶಿವಯೋಗ ಸಮಾಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು

ಅನುಷ್ಠಾನದ ಅಂಗವಾಗಿ ಮಠದ ಆವರಣದಲ್ಲಿ 775 ಶಿವಲಿಂಗಗಳ ಪ್ರತಿಷ್ಠಾಪನೆ, ಗೋ ಪೂಜೆ, ಬೂದೀಶ್ವರ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ಜೇರಟಗಿಯ ಮಡಿವಾಳ ಶಾಸ್ತ್ರೀಜಿಯವರಿಂದ ಬಸವ ಪುರಾಣ ಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಗಳ ದರ್ಶನದ ಬಳಿಕ ಉಳವಿ ಚನ್ನಬಸವೇಶ್ವರ ಮಠಕ್ಕೆ ಕಾಲ್ನಡಿಗೆಯ ಪಾದಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿದೆ.

ಲಕ್ಷಾಂತರ ಭಕ್ತರ ಸಾಗರ

ಶ್ರೀಗಳ ಶಿವಯೋಗ ಸಮಾಧಿ ಅಂತ್ಯದ ಕ್ಷಣವನ್ನು ಕಣ್ತುಂಬಿಕೊಳ್ಳಲು ಗದಗ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಯಾದಗಿರಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಅಂತೂರ-ಬೆಂತೂರ ಗ್ರಾಮಕ್ಕೆ ಆಗಮಿಸಿದ್ದರು. ಮೌನಾನುಷ್ಠಾನದ ದಿನಗಳಲ್ಲಿ ಪ್ರತಿದಿನ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದರು. ಕೊನೆಯ ಎರಡು ದಿನಗಳಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನ ಸೇರಿದ್ದರು ಎಂದು ಅಂದಾಜಿಸಲಾಗಿದೆ. ಇಡೀ ಗ್ರಾಮವೇ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.

ಧಾರ್ಮಿಕ ಹಾಗೂ ವೈಜ್ಞಾನಿಕ ವಲಯದಲ್ಲಿ ಚರ್ಚೆ

ರಾಚೋಟೇಶ್ವರ ಶ್ರೀಗಳ 33 ದಿನಗಳ ಶಿವಯೋಗ ಸಮಾಧಿ ಧಾರ್ಮಿಕ ಹಾಗೂ ವೈಜ್ಞಾನಿಕ ವಲಯದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಭಕ್ತರು ಮತ್ತು ಧಾರ್ಮಿಕ ಮುಖಂಡರು ಇದನ್ನು ಆಧ್ಯಾತ್ಮಿಕ ಸಾಧನೆಯ ಅಪರೂಪದ ಉದಾಹರಣೆಯಾಗಿ ಪರಿಗಣಿಸುತ್ತಿದೆ

ಬೃಹತ್ ದಾಸೋಹ ವ್ಯವಸ್ಥೆ

ಅನುಷ್ಠಾನದ ಹಿನ್ನೆಲೆಯಲ್ಲಿ ಮಠದಲ್ಲಿ 35 ದಿನಗಳಿಂದ ನಿರಂತರವಾಗಿ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು, ಪ್ರತಿದಿನ 25ರಿಂದ 30 ಸಾವಿರ ಜನರಿಗೆ ಹಾಗೂ ಕೊನೆಯ ಎರಡು ದಿನಗಳಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬೃಹತ್ ವ್ಯವಸ್ಥೆಯನ್ನು ಮಠದ ಮಂಡಳಿ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಶನಿವಾರ ಬೆಳಿಗ್ಗೆ ಗರ್ಭಗುಡಿಯಿಂದ ಶ್ರೀಗಳು ಹೊರಬರುತ್ತಿದ್ದಂತೆ ನೆರೆದಿದ್ದ ಭಕ್ತರು “ಹರ ಹರ ಮಹಾದೇವ” ಹಾಗೂ “ಬೂದೀಶ್ವರ ಮಹಾರಾಜ್ ಕೀ ಜೈ” ಎಂಬ ಜಯಘೋಷಗಳನ್ನು ಮೊಳಗಿಸಿದರು. ಶ್ರೀಗಳ ಮೇಲೆ ಪುಷ್ಪವೃಷ್ಟಿ ಮಾಡಿ ಭಕ್ತಿಪೂರ್ವಕವಾಗಿ ಸ್ವಾಗತಿಸಿದ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದರ್ಶನ ಹಾಗೂ ಆಶೀರ್ವಾದ ಪಡೆದರು. ಸದ್ಯ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಭಕ್ತರು ಪ್ರಾರ್ಥಿಸುತ್ತಿದ್ದಾರೆ.

Leave a Reply

Your email address will not be published. Required fields are marked *