
ಗದಗ: ಅಕ್ರಮ ಬಡ್ಡಿ ವ್ಯವಹಾರ, ಅತಿಯಾದ ಬಡ್ಡಿ ವಸೂಲಿ ಹಾಗೂ ಸಾಲಗಾರರಿಗೆ ಬೆದರಿಕೆ ಹಾಕುತ್ತಿರುವ ಕುರಿತು ಬಂದ ದೂರಿನ ಮೇರೆಗೆ ಗದಗ ಜಿಲ್ಲಾ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ 150ಕ್ಕೂ ಹೆಚ್ಚು ಚೆಕ್‌ಗಳು, 65ಕ್ಕೂ ಹೆಚ್ಚು ಖಾಲಿ ಬಾಂಡ್‌ಗಳು, ವಿವಿಧ ಒಪ್ಪಂದ ಪತ್ರಗಳು ಹಾಗೂ ಪ್ರಮುಖ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ 9 ಬ್ಯಾಂಕ್ ಪಾಸ್‌ಬುಕ್‌ಗಳು, 11 ಚೆಕ್‌ಬುಕ್‌ಗಳು, 5ಕ್ಕೂ ಹೆಚ್ಚು ಎಟಿಎಂ ಕಾರ್ಡ್‌ಗಳು ಹಾಗೂ 3 ಪ್ಯಾನ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಯಾವುದೇ ಲೆಕ್ಕಪತ್ರಗಳಲ್ಲಿ ನಮೂದಿಸದ ಸುಮಾರು ₹60 ಲಕ್ಷ ಮೌಲ್ಯದ 422.4 ಗ್ರಾಂ ಚಿನ್ನಾಭರಣ ಹಾಗೂ ₹5.5 ಲಕ್ಷ ನಗದು ಹಣ ಪತ್ತೆಯಾಗಿದೆ. ಇದರ ಜೊತೆಗೆ 10 ಗೋವಾ ಮದ್ಯದ ಬಾಟಲಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ದಾಖಲೆಗಳು ಮತ್ತು ವಸ್ತುಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಕ್ರಮ ಬಡ್ಡಿ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಈ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆ ನೀಡಿದ್ದು, ಅಕ್ರಮ ಬಡ್ಡಿ ವ್ಯವಹಾರಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

