
ಲಕ್ಷ್ಮೇಶ್ವರ (ಗದಗ): “ನಾನು ಕುಳಿತಿರುವ ಈ ಜಾಗದಲ್ಲಿ ವಿಶೇಷ ಶಕ್ತಿಯಿದೆ. ಸಮಯ ಬರಲಿ, ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ” ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸುಕ್ಷೇತ್ರ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಅವರು, ಲಿಂಗೈಕ್ಯ ರಂಭಾಪುರಿ ವೀರಗಂಗಾಧರ ಸ್ವಾಮಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮುಕ್ತಿಮಂದಿರದಲ್ಲಿ ಕೆಲ ಹೊತ್ತು ಧ್ಯಾನ ಮತ್ತು ಜಪದಲ್ಲಿ ತೊಡಗಿಸಿಕೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಗಂಗಾಧರ ಸ್ವಾಮಿಗಳ ತಪೋಭೂಮಿಯಾದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿರುವುದು ಮನಸ್ಸಿಗೆ ಶಾಂತಿ ನೀಡಿದೆ ಎಂದರು.

ಮುಂದಿನ ಸಿಎಂ ಘೋಷಣೆ ಮತ್ತು ಅಭಿಮಾನದ ಉತ್ತುಂಗ:
ಡಿ.ಕೆ. ಶಿವಕುಮಾರ್ ಅವರು ಪಟ್ಟಣದ ಮಹಾಕವಿ ಪಂಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ “ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜೈ” ಎಂಬ ಘೋಷಣೆಗಳು ಮೊಳಗಿದವು. ಅಭಿಮಾನಿಗಳು ಬೃಹತ್ ಗುಲಾಬಿ ಹೂವಿನ ಮಾಲೆಯನ್ನು ಕ್ರೇನ್ ಮೂಲಕ ಹಾಕುವ ಮೂಲಕ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರ ಕಟ್ಟಾ ಅಭಿಮಾನಿ ನೀಲಪ್ಪ ಶೆರಸೂರಿ ಅವರು ಕಂಬಳಿ ಹೊದಿಸಿ, ಟಗರು ಮರಿಯನ್ನು ಕಾಣಿಕೆಯಾಗಿ ನೀಡಿದ್ದು ವಿಶೇಷವಾಗಿತ್ತು.
ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿ ಕೇಂದ್ರಕ್ಕೆ ಟೀಕೆ:
ಇದೇ ವೇಳೆ ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕದ ಕುರಿತು ಮಾತನಾಡಿದ ಡಿಕೆಶಿ, ಈ ವಿಧೇಯಕಕ್ಕೆ ಎದುರಾದ ಹಿನ್ನಡೆಯು ‘ಇಂಡಿಯಾ’ ಮೈತ್ರಿಕೂಟದ ಗೆಲುವಾಗಿದೆ ಎಂದು ಬಣ್ಣಿಸಿದರು. ಮಹಿಳಾ ಮೀಸಲಾತಿ ನೆಪದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸ್ಥಾನಗಳನ್ನು ಕುಗ್ಗಿಸಿ ಉತ್ತರ ಭಾರತದ ಸ್ಥಾನಗಳನ್ನು ಹೆಚ್ಚಿಸುವ ಬಿಜೆಪಿ ಸಂಚಿಗೆ ಮುಖಭಂಗವಾಗಿದೆ. ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಂಗ್ರೆಸ್ ಪಕ್ಷದ ಕನಸಿನ ಕೂಸಾಗಿದ್ದು, ನಾವು ಅದರ ಪರವಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ತಂದಿರುವ ಈ ವಿಧೇಯಕದ ಸಮಯ ಸರಿಯಿಲ್ಲ ಎಂದು ಅವರು ಕಿಡಿಕಾರಿದರು.
ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.

