
ಗದಗ: 26 ವರ್ಷದ ಯುವತಿಯ ಮೇಲೆ ವಿವಿಧ ದಿನಗಳಲ್ಲಿ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿದ ಆರೋಪದಡಿ ಆರ್‌ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಏಳು ಮಂದಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಟಗೇರಿ ನಿವಾಸಿಗಳಾದ ಸಿಕಂದರ್ ಬೇಪಾರಿ, ಶಬೀರಅಹ್ಮದ್ ಅಲಿಯಾಸ್ ಜೂನಸಾಬ್, ಮಹ್ಮದ್ ರಫೀಕ್ ಲಂಗೋಟಿ, ಪ್ರದೀಪ್ ಸಾಗರ ನವಲೇಕರ, ಭರತ್ ಮಹಾದೇವಪ್ಪ ಕೊರವರ, ಸಂದೀಪ್ ಸಾಗರ ನವಲೇಕರ ಹಾಗೂ ಬೆಳ್ಳಟ್ಟಿ ಗ್ರಾಮದ ಆರ್‌ಎಂಪಿ ವೈದ್ಯ ನಾಗರಾಜ್ ಚಿದಾನಂದ ಕಮತರ ಮತ್ತು ಶಿಗ್ಲಿಯ ಸ್ಟಾಫ್ ನರ್ಸ್ ರೇಖಾ ಫಕೀರಪ್ಪ ಶಿರಹಟ್ಟಿ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ, ಸಂತ್ರಸ್ತ ಯುವತಿ ತನ್ನ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಿರುವ ಕುರಿತು ಜುಲೈ 26ರಂದು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ಮುಂದುವರಿಸಿದಾಗ ಸಿಕಂದರ್, ಶಬೀರಅಹ್ಮದ್, ಪ್ರದೀಪ್ ಹಾಗೂ ಭರತ್ ಅವರು ಬೇರೆ ಬೇರೆ ದಿನಗಳಲ್ಲಿ ಯುವತಿಯ ಮೇಲೆ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಯುವತಿ ಗರ್ಭಿಣಿಯಾದ ಬಳಿಕ ಆರೋಪಿ ಸಂದೀಪ್ ನವಲೇಕರ, ಆರ್‌ಎಂಪಿ ವೈದ್ಯ ನಾಗರಾಜ್ ಕಮತರ ಹಾಗೂ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಅವರೊಂದಿಗೆ ಸೇರಿಕೊಂಡು ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಲ್.ಕೆ. ಜೂಲಕಟ್ಟಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತಂಡವು ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸಿದೆ. ಬಂಧಿತ ಏಳು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

